ಶಿರಸಿ: ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳಿಗೂ ಸರಕಾರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಲು ಮುಂದಾಗಿರುವುದನ್ನು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ, ಹಿಂದೂ ಮಹಾ ಮಂಡಳದ ಗೌರವಾಧ್ಯಕ್ಷರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾರಿತ ಸಂಸ್ಥೆಗಳ ತಿದ್ದುಪಡಿ ಅಧಿನಿಯಮ 2011ರ ಕುರಿತು ಸುಪ್ರಿಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಹಂತದಲ್ಲಿ ಇರಬೇಕಾದರೆ ಯಾವುದೋ ಒಂದು ಸೆಕ್ಷನ್‍ಗೆ ಮಾತ್ರ ವಿನಾಯಿತಿ ತೆಗೆದಕೊಂಡು ಈ ರೀತಿಯ ಪ್ರಕ್ರಿಯೆಗೆ ಮುಂದಾಗುವುದು ನ್ಯಾಯವಲ್ಲ. ಕಳೆದ 22 ವರ್ಷಗಳಿಂದ ಈ ಕಾನೂನಿನ ಬಗ್ಗೆ ನಮ್ಮ ಆಗ್ರಹವನ್ನು ಸಲ್ಲಿಸುತ್ತಲೇ ಇದ್ದೇವೆ. ಈಗಾಗಲೇ 2 ಬಾರಿ ರಾಜ್ಯ ಉಚ್ಛ ನ್ಯಾಯಾಲಯವು ಈ ಕಾನೂನನ್ನು ಅಸಂವಿಧಾನಿಕ ಎಂದು ತಿರಸ್ಕರಿಸಿದೆ. ಇಂಥ ಕಾನೂನಿನ ಬಗ್ಗೆಯೇ ಮತ್ತೆ ಜಾರಿಗೆ ಪ್ರಯತ್ನಿಸುವುದು ಸರಿಯಲ್ಲ. ಸರ್ವಸಮ್ಮತವಾದ ಹೊಸ ಕಾನೂನನ್ನು ಜಾರಿಗೆ ತರಲು ಅವಕಾಶವಿದೆ. ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸರ್ವಸಮ್ಮತವಾದ ಕಾನೂನು ಜಾರಿಗೆ ಬರುವ ತನಕ ಸರಕಾರ ಈ ರೀತಿಯ ಪ್ರಯತ್ನಗಳನ್ನು ಸ್ಥಗಿತಗೊಳಿಸಬೇಕು ಎಂದರು.
ರಾಜ್ಯ ಸರಕಾರ ವ್ಯವಸ್ಥಾಪನಾ ಸಮಿತಿ ರಚನೆಗೆ ಹೊರಟಿರುವ ರಾಜ್ಯದ ವಿವಿಧ ದೇವಸ್ಥಾನಗಳ ಪೈಕಿ ಮುಜರಾಯಿ ಇಲಾಖೆಗೆ ಸೇರದ ಅನೇಕ ದೇವಸ್ಥಾನಗಳಿವೆ. ಆ ದೇವಸ್ಥಾನಗಳಿಗೆ ಕೂಡ ವ್ಯವಸ್ಥಾನ ಸಮಿತಿ ರಚಿಸುವ ಬಗ್ಗೆ ಆದೇಶ ಹೊರಡಿಸಿ, ಅರ್ಜಿಗಳನ್ನು ಆಹ್ವಾನಿಸಿದೆ.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ, ಅದರಲ್ಲೂ ವಿಶೇಷವಾಗಿ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ್ದು ಬಳಿಕ ಕರ್ನಾಟಕ ರಾಜ್ಯ ಸರಕಾರದ ಆಡಳಿತಕ್ಕೆ ಹಸ್ತಾಂತರವಾದ ದೇವಸ್ಥಾನಗಳಿಗೆ ಆಡಳಿತ ವ್ಯವಸ್ಥೆ ನೇಮಕ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರ ಮೊದಲಿಂದಲೂ ಜನಗಳೇ ನಡೆಸಿಕೊಂಡು ಬಂದಿರುವ ದೇವಸ್ಥಾನಗಳಿಗೆ ಈ ರೀತಿ ವ್ಯವಸ್ಥಾಪನಾ ಸಮಿತಿ ನೇಮಕದ ಪ್ರಯತ್ನವನ್ನು ಸರಕಾರ ಮಾಡಬಾರದು. ಒಂದೊಮ್ಮೆ ವ್ಯವಸ್ಥಾಪನಾ ಸಮಿತಿ ರಚನೆಯ ಅಗತ್ಯ ಸರಕಾರಕ್ಕೆ ಕಂಡುಬಂದರೂ ಸಹ ಅವುಗಳ ಖಾಸಗಿ ಮಾಲಿಕತ್ವವನ್ನು ಉಳಿಸಿಕೊಂಡೇ ವ್ಯವಸ್ಥಾಪನಾ ಸಮಿತಿ ರಚನೆ ಸಾಧ್ಯವಿದೆ. ಇಂಥ ದೇವಸ್ಥಾನಗಳಲ್ಲಿ ಹಾಲಿ ಇರುವ ಆಡಳಿತ ಮಂಡಳಿಗೇ ವ್ಯವಸ್ಥಾಪನಾ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸರಕಾರ ಸೂಚಿಸಬಹುದು. ಉದಾಹರಣೆಗೆ ಸಹಕಾರಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ ಅವಧಿ ಮುಗಿದ ಬಳಿಕ ಸಹಕಾರ ಇಲಾಖೆಯು ಹೊಸ ಡಳಿತ ಮಂಡಳಿ ರಚಿಸಿ ವರದಿ ಸಲ್ಲಿಸುವಂತೆ ಸೂಚನೆ ಕೊಡುತ್ತದೆ. ಆಯ್ಕೆ ಮಾಡುವ ಸ್ವಾತಂತ್ರ್ಯ ಆಯಾ ಸಹಕಾರಿ ಸಂಸ್ಥೆಗಳಿಗೆ ಇರುತ್ತದೆ. ಇದೇ ಮಾದರಿಯಲ್ಲಿ ಸರಕಾರ ಖಾಸಗಿ ದೇವಸ್ಥಾನಗಳಿಗೂ ಆಡಳಿತ ಮಂಡಳಿ ರಚಿಸಿ ವರದಿ ಕೊಡುವಂತೆ ಸೂಚಿಸಬಹುದು ಎಂದರು.
ಇದನ್ನು ಹೊರತುಪಡಿಸಿ, ಮುಜರಾಯಿ ಇಲಾಖೆಯ ಆಯುಕ್ತರ ಕಚೇರಿಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು, ಆಡಳಿತ ಮಂಡಳಿಯನ್ನು ಸರಕಾರವೇ ರಚನೆ ಮಾಡಲು ಇರುವ ಅವಕಾಶ ಸರಿಯಲ್ಲ. ಈ ರೀತಿಯಲ್ಲಿ ಎಲ್ಲ ದೇವಸ್ಥಾನಗಳನ್ನೂ ಸರಕಾರಿಕರಣಗೊಳಿಸುವ ಬಗ್ಗೆ ನಮ್ಮ ವಿರೋಧವಿದೆ ಎಂದೂ ಹೇಳಿದರು. ಇದೇ ವೇಳೆ, ಸರಕಾರ ದೇವಸ್ಥಾನಗಳ ಅಭಿವೃದ್ಧಿಗೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಸ್ವಾಗತಿಸಿದರು.