ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಶ್ರೀನಿಕೇತನ ಶಾಲೆಯಲ್ಲಿ ನ. 11, ಶನಿವಾರದಂದು ಸ್ಕೌಟ್ ಗೈಡ್ಸ್ ಘಟಕವನ್ನು ಉದ್ಘಾಟಿಸಲಾಯಿತು. ಘಟಕದ ಸಂಸ್ಥಾಪನಾ ದಿನದ 74ನೇ ವರ್ಷಾಚರಣೆಯ ಪ್ರಯುಕ್ತ ಧ್ವಜ ಚೀಟಿಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಹಿರಿಯ ಸ್ಕೌಟ್ ಅಧಿಕಾರಿಗಳಾದ ಎಸ್.ಎಸ್.ಭಟ್ ಲೋಕೇಶ್ವರ ಮಾತನಾಡಿ, ಭಾರತದ ಶಾಲೆಗಳಲ್ಲಿ ಸ್ಕೌಟ್ ಗೈಡ್ಸ್ನ ಬೆಳವಣಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಶಿಸ್ತುಪಾಲನೆಯನ್ನು ಹುರಿದುಂಬಿಸುವ ಧ್ಯೇಯದ ಕುರಿತು ಮಾತನಾಡಿದರು. ಅನಂತರ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮ ಭಟ್ ಮಾತನಾಡಿ, ವಿದ್ಯಾರ್ಥಿಗಳು ಸೆಲ್ಯೂಟ್ ಮಾಡುವ ವಿಶಿಷ್ಟ ಶೈಲಿ ಹಾಗೂ ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಶಾಲೆಯ ಕಾರ್ಯದರ್ಶಿ ಕೆ. ಎನ್. ಹೊಸಮನಿ ಅತಿಥಿಗಳಿಗೆ ನೂತನ ಘಟಕವನ್ನು ಆರಂಭಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಪ್ರಾಂಶುಪಾಲರಾದ ವಸಂತ್ ಭಟ್ ಮಾತನಾಡಿ ಮಕ್ಕಳಲ್ಲಿ ಸೇವಾ ಮನೋಭಾವವನ್ನು ಬೆಳೆಸಲು ಈ ಘಟಕವು ಸಹಾಯಕಾರಿಯಾಗಿದೆ ಎಂದು ಹೇಳಿದರು. ಆಗಮಿಸಿದ ಅತಿಥಿಗಳಿಗೆ ಶಾಲೆ ಮತ್ತು ಸಂಸ್ಥೆಯ ಪರವಾಗಿ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಶಾಲೆಯ ಸ್ಕೌಟ್ ಗೈಡ್ಸ್ ಮಾರ್ಗದರ್ಶಕರಾದ ವಿವೇಕ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಶಿಕ್ಷಕಿಯರಾದ ಶ್ರೀಮತಿ ಸೀಮಾ ನಾಯ್ಕ ಸ್ವಾಗತಿಸಿದರೆ, ಶ್ರೀಮತಿ ರಾಜಲಕ್ಷ್ಮಿ ಹೆಗಡೆ ವಂದಿಸಿದರು. ಶ್ರೀಮತಿ ದೀಪಾ ಎಮ್. ಕಾರ್ಯಕ್ರಮವನ್ನು ನಿರೂಪಿಸಿದರು.