ಕಾರವಾರ: ಹಿರಿಯ ನಾಗರಿಕರು ತಮ್ಮ ದಿನಚರ್ಯ ಮತ್ತು ಋತುಚರ್ಯವನ್ನು ಪಾಲಿಸಿಕೊಂಡು ಹೋಗಬೇಕಾಗಿದ್ದು, ಎಲ್ಲ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಕಾಲಕಾಲಕ್ಕೆ ಬಿಪಿ ಮತ್ತು ಬ್ಲಡ್, ಶುಗರ್ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ ಮತ್ತು ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ ಅಧಿಕಾರಿ ಡಾ.ಲಲಿತಾ ಶೆಟ್ಟಿ ಹೇಳಿದರು.
ಅವರು ಸೋಮವಾರ, 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ ಇಲಾಖೆ ಹಾಗೂ ಜಿಲ್ಲಾ ನಿವೃತ್ತ ನೌಕರರ ಸಂಘ ಕಾರವಾರ ಹಾಗೂ ಅಪೋಲೋ ಪಾರ್ಮಾಸಿ ಇವರ ಸಹಯೋಗದಲ್ಲಿ ಜಿಲ್ಲಾ ಸರಕಾರಿ ಆಯುರ್ವೇದ ಆಸ್ಪತ್ರೆ ಕಾರವಾರ ಇಲ್ಲಿನ ಯೋಗಾ ಹಾಲ್‌ನಲ್ಲಿ ನಿವೃತ್ತ ನೌಕರರಿಗಾಗಿ ಮತ್ತು ಹಿರಿಯ ನಾಗರಿಕರಿಗಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಸೆ.9 ರಿಂದ ನ.10 ರವರೆಗೆ 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ‘’ಪ್ರತಿ ದಿನ ಪ್ರತಿ ಮನೆಯಲ್ಲಿ ಆಯುರ್ವೇದ ‘’ ಎಂಬ ಘೋಷ ವಾಕ್ಯದೊಂದಿಗೆ ಪ್ರತಿ ಮನೆಗೂ ಆಯುರ್ವೇದದ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ನಿವೃತ್ತ ನೌಕರರ ಸಂಘದ ಜಿಲ್ಲಾದ್ಯಕ್ಷ ವಿ ಎಂ ಹೆಗಡೆ ಇವರು ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಎಲ್ಲ ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕರು ಪಡೆದುಕೊಳ್ಳಬೇಕೆಂದು ಹೇಳಿದರು.
ಅಪೋಲೋ ಪಾರ್ಮಸಿ ಕಾರವಾರ ಇವರು ಶಿಬಿರದಲ್ಲಿ ಭಾಗವಹಿಸಿದ ನಾಗರಿಕರಿಗೆ ಉಚಿತವಾಗಿ ರಕ್ತ ತಪಾಸಣೆ ಮಾಡಿ ವರದಿ ನೀಡಿದರು. ತಜ್ಞ ವೈದ್ಯರಾದ ಡಾ ಸಂಗಮೇಶ ಪರಂಡಿ ಮತ್ತು ಸುಮಾ ಆಚಾರ ಮತ್ತು ಆಯುಷ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಸುಮಾರು 70 ಕ್ಕೂ ಹೆಚ್ಚು ಹಿರಿಯ ನಾಗರಿಕರು ಶಿಬಿರದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ಗೌರವಾದ್ಯಕ್ಷ ಶಿವಾನಂದ ಕದಂ, ಉಪಾಧ್ಯಕ್ಷ ಸಿ ಡಿ ದಳವಿ, ಕಾರ್ಯದರ್ಶಿ ಅನೀಲ ನಾಯ್ಕ ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಸತೀಶ ಗೋಸಾವಿ ಪ್ರಾರ್ಥಿಸಿದರು. ಡಿ ಆರ್ ಸಾವಂತ ಸ್ವಾಗತಿಸಿದರು ಹಾಗೂ ಸಂಜೀವಕುಮಾರ ನಾಯ್ಕ ವಂದನಾರ್ಪಣೆ ಮಾಡಿದರು.