ಕಾರವಾರ: ನಗರದ ಟ್ಯಾಗೋರ್ ಕಡಲತೀರದಲ್ಲಿ ರಾತ್ರಿಯ ಕತ್ತಲು ಆರಂಭವಾಗುವ ಸಮಯದಲ್ಲಿ ಬೆಳಗುವ ದೀಪಗಳ ಸಾಲಿನಲ್ಲಿ ಮೂಡಿದ ಭಾರತ ಭೂಪಟದ ಚಿತ್ರಣ ಹಾಗೂ ಆಕರ್ಷಕ ಮರಳು ಶಿಲ್ಪದ ರಚನೆ ಸಾರ್ವಜನಿಕರ ಕಣ್ಮನ ಸೆಳೆಯುವುದರ ಜೊತೆಗೆ ವಿಶಿಷ್ಟ ಮತ್ತು ಅತ್ಯಾಕಷÀðವಾಗಿ ಸಾರ್ವಜನಿಕರಿಗೆ ಮತದಾರರ ಜಾಗೃತಿ ಸಂದೇಶವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ ಕೇಂದ್ರದ ಮೂಲಕ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಲು ಮರಳು ಶಿಲ್ಪದಲ್ಲಿ ಮೂಡಿದ್ದ ಮತದಾನ ಮಾಡುವ ಕೈ ಬೆರಳಿನ ಗುರುತು ಹಾಗೂ ಭಾರತ ಭೂಪಟದಲ್ಲಿನ ಕರ್ನಾಟಕ ಭೂಪಟದಲ್ಲಿ ಹಣತೆ ಹಚ್ಚುವ ಮೂಲಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ರದ್ದುಪಡಿಸುವಿಕೆ ಕುರಿತಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮವು ನವೆಂಬರ್ 18 ಮತ್ತು 19ರಂದು ಜಿಲ್ಲೆಯಾದ್ಯಂತ ನಡೆಯಲಿದ್ದು, 1-1 -2024ಕ್ಕೆ 18 ವರ್ಷ ತುಂಬುವ ಎಲ್ಲಾ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೆರ್ಪಡೆ ಮಾಡುವ ಮೂಲಕ ತಮ್ಮ ಹಕ್ಕು ಚಲಾವಣೆಯ ಅಧಿಕಾರ ಪಡೆಯುವಂತೆ ತಿಳಿಸಿದರು.
ಅಲ್ಲದೆ ಇದುವರೆಗೂ ಮತದಾರರ ಪಟ್ಟಿಗೆ ಸೇರ್ಪಡೆ ಆಗದೇ ಇರುವವರು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು, ತಪ್ಪುಗಳಾಗಿದ್ದಲ್ಲಿ ಸರಿಪಡಿಸಿಕೊಳ್ಳುವುದು ಹಾಗೂ ಮೃತಪಟ್ಟಿದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದು ಕೂಡಾ ಈ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ನಡೆಯಲಿದೆ. ಮತದಾರರು ತಮ್ಮ ವ್ಯಾಪ್ತಿಯ ಬಿಎಲ್‌ಓಗಳನ್ನು ಸಂಪರ್ಕಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ ಹಾಗೂ ಈಗಾಗಲೇ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಈಶ್ವರಕುಮಾರ ಖಂಡೂ ಮಾತನಾಡಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮತದಾನದ ಬಗ್ಗೆ ವ್ಯಾಪಕ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲೆಯ ಎಲ್ಲಾ ಮತದಾರರು ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ತಮ್ಮ ಅಧಿಕಾರ ಚಲಾಯಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಇದ್ದರು.