ಶಿರಸಿ: ನಗರದ ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿಯಿಂದ ನೆಮ್ಮದಿ ಆವರಣದಲ್ಲಿ ನಿರ್ಮಾಣಗೊಂಡ ರಂಗಧಾಮವನ್ನು ಊರಿಗೆ ಒಪ್ಪಿಸುವುದರ ಜೊತೆಗೆ ನ.11 ರಂದು ಧನ್ಯವಾದ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸಮಿತಿ ಪ್ರಮುಖ ವಿ.ಪಿ.ಹೆಗಡೆ ವೈಶಾಲಿ ತಿಳಿಸಿದ್ದಾರೆ.
ಈ ಕುರಿತು ನಗರದ ನೆಮ್ಮದಿ ಕುಟೀರದಲ್ಲಿ ಬುಧವಾರ ರುದ್ರಭೂಮಿ ಅಭಿವೃದ್ಧಿ ಸಮಿತಿಯ ವಿ.ಪಿ.ಹೆಗಡೆ ವೈಶಾಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸರ್ಕಾರ, ದಾನಿಗಳ, ಸಂಘ ಸಂಸ್ಥೆಗಳ ಸಹಕಾರದಿಂದ ರಂಗಧಾಮ ನಿರ್ಮಾಣ ಮಾಡಲಾಗಿದೆ. ಅವರೆಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಲು ಧನ್ಯವಾದ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ನ.11 ರಂದು ನೆಮ್ಮದಿ ಆವರಣದ ರಂಗಧಾಮದಲ್ಲೇ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ರಂಗಧಾಮಕ್ಕೆ ಉದ್ಘಾಟನೆ ಎಂಬುದು ಇಲ್ಲ. ಇದನ್ನು ನಿರ್ಮಿಸಲು ಎಲ್ಲ ರೀತಿಯಿಂದ ಸಹಾಯ, ಸಹಕಾರ ನೀಡಿದವರಿಗೆ ಧನ್ಯವಾದ ಅರ್ಪಿಸುವ ಉದ್ದೇಶ ನಮ್ಮದು. ಇದರ ಭಾಗವಾಗಿ ಕಾರ್ಯಕ್ರಮದಲ್ಲಿ ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಹಾಗೂ ವಿಸ್ತಾರ ಮೀಡಿಯಾ ಸಿಇಒ ಹರಿಪ್ರಕಾಶ ಕೋಣೆಮನೆ ಅವರಿಗೆ ಸನ್ಮಾನ ನೆರವೇರಿಲಿದೆ. ಅವರ ಜೊತೆಗೆ ಎಲ್ಲ ಕಲಾಸಕ್ತರು ಭಾಗವಹಿಸಲಿದ್ದು, ಒಟ್ಟೂ 90 ನಿಮಿಷಗಳ ಕಾರ್ಯಕ್ರಮ ನಡೆಯಲಿದೆ ಎಂದರು.
ರಂಗಧಾಮ ನಿರ್ಮಾಣಕ್ಕೆ ಮೊಟ್ಟ ಮೊದಲು ಹಿಂದಿನ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರು 60 ಲಕ್ಷ ರೂ ನೀಡಿದ್ದರು. ಅದರ ಜೊತೆಗೆ ದಾನಿಗಳ ಸಹಕಾರ ಹಾಗೂ ಸಮಿತಿಯವರು ಸಾಲ ಮಾಡಿ ಒಟ್ಟೂ 1.60 ಕೋಟಿ ರೂ. ವೆಚ್ಚದಲ್ಲಿ ಈ ರಂಗಧಾಮ ತಲೆಎತ್ತಿ ನಿಂತಿದೆ. ಇದನ್ನು ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲು ಯೋಚಿಸಿದ್ದು, ನಿರ್ವಹಣೆಗೆ ಅಗತ್ಯವಿರುವಷ್ಟು ಕಡಿಮೆ ದರವನ್ನು ಪಡೆಯಲು ಚಿಂತನೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಕಾಶೀನಾಥ ಮೂಡಿ, ನಾಗರಾಜ ಗಂಗೊಳ್ಳಿ, ಪಿ.ವಿ.ಹೆಗಡೆ ಬೆಳ್ಳೆಕೇರಿ ಇದ್ದರು.