ಶಿರಸಿ: ಧರ್ಮ ಗ್ರಂಥದ ಮೇಲಿನ ಶ್ರದ್ಧೆ ಕಡಿಮೆಯಾಗಿದ್ದರಿಂದ ಭಗವದ್ಗೀತೆ ಮೇಲೆ ನ್ಯಾಯಾಲಯಗಳಲ್ಲಿ ಪ್ರಮಾಣ ಸ್ವೀಕರಿಸುವ ಪದ್ಧತಿ ಕಡಿಮೆಯಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಕಾರಿ ಶ್ರೀಮದ್ ಶ್ರೀ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯನ್ನು ಕೇಂದ್ರವಾಗಿಟ್ಟುಕೊ0ಡು ನಡೆಸಲಾಗುತ್ತಿರುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನದ ಪೂರ್ವಭಾವಿಯಾಗಿ ಭಾನುವಾರ ಬೆಳಗಾವಿಯ ಗೀತ-ಗಂಗಾ ಕಟ್ಟಡದಲ್ಲಿ ನಡೆದ ನ್ಯಾಯವಾದಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮಲ್ಲಿ ನೈತಿಕತೆಯ ಪಥನವಾಗುತ್ತಿದೆ. ಹಾಗಾಗಿ ಅಪರಾಧ ಪ್ರಕರಣ ಹೆಚ್ಚುತ್ತಿದೆ. ಆಧ್ಯಾತ್ಮಿಕತೆಯ ಬಲವಿದ್ದರೆ ನೈತಿಕತೆ ಗಟ್ಟಿಯಾಗಿ ಉಳಿಯುತ್ತದೆ ಎಂದು ಸ್ವಾಮಿಗಳು ಹೇಳಿದರು.
ಅನಧಿಕೃತವಾಗಿ ಹಣ ಮಾಡುವುದು ಹೆಚ್ಚಾಗುತ್ತಿದೆ. ದೇಶದ ಉದ್ದಗಲಕ್ಕೂ ನೈತಿಕತೆಯ ಪಥನವಾಗುತ್ತಿದೆ. ವಿವಾಹ ವಿಚ್ಛೇಧನ ಪರಕರಣಗಳೂ ಹೆಚ್ಚಾಗುತ್ತಿವೆ. ಕುಟುಂಬ ವ್ಯವಸ್ಥೆ ದುರ್ಬಲವಾಗುತ್ತಿದೆ. ಆದ್ಯಾತ್ಮಿಕ ಚಿಂತನೆ ಇದ್ದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ. ನಾವು ಜೈಲಿನಲ್ಲಿ ಅಭಿಯಾನ ಮಾಡಿದ ಅನೇಕ ಕಡೆ ಜೈಲಿನಿಂದ ಹೊರಬಂದವರ ಮನ ಪರಿವರ್ತನೆ ಆದ ಉದಾಹರಣೆ ಇದೆ ಎಂದು ಶ್ರೀಗಳು ತಿಳಿಸಿದರು.
ಅಭಿಯಾನ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಂ.ಕೆ.ಹೆಗಡೆ, ಹವ್ಯಕ ಮಂಡಳ ಅಧ್ಯಕ್ಷೆ ಪೂರ್ಣಿಮಾ ಹೆಗಡೆ, ವಿದ್ವಾನ್ ಸೂರ್ಯನಾರಾಯಣ ಭಟ್ಟ, ಶ್ರೀಧರ ಗುಮಾನಿ, ಶ್ರೀಪಾದ ಭಟ್ಟ, ಎಂ.ಟಿ.ಹೆಗಡೆ, ಅರುಣ ನಾಯ್ಕ, ಪತ್ರಕರ್ತ ದಿಲೀಪ ಕುರಂದವಾಡೆ ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.