ಸಿದ್ದಾಪುರ: ತಾಲೂಕಿನ ತ್ಯಾಗಲಿ ಪಂಚಾಯತ ವ್ಯಾಪ್ತಿಯ ಹಂಗಾರಖಂಡದ ಶ್ರೀ ನಾಗ ಚೌಡೇಶ್ವರಿ ಸೇವಾ ಸಮಿತಿಯವರಿಂದ ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ತ್ಯಾಗಲಿಯಿಂದ- ಹಂಗಾರಖಂಡ -ಇಡುಕೈ – -ಸಾಸ್ಮೇಕಟ್ಟೆ ಕತ್ರಿವರೆಗೆ ರಸ್ತೆ ಅಕ್ಕ ಪಕ್ಕದಲ್ಲಿರುವ ಗಿಡ ಗಂಟಿಗಳನ್ನು ಸ್ವಚ್ಚ ಗೋಳಿಸಿ,ಕರೆಂಟ್ ಲೈನ್ ಗೆ ತಾಗುವ ಗಿಡಗಳನ್ನು ಕತ್ತರಿಸಿ ಕಾಯಕವೇ ಕೈಲಾಸ ಎಂಬ ಮಾತಿನಂತೆ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಎಲ್ಲಾ ಗ್ರಾಮಸ್ಥರಿಗೆ ಲಘು ಉಪಹಾರ,ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಚ್ಚತಾ ಕಾರ್ಯದಲ್ಲಿ ಶ್ರೀ ನಾಗಚೌಡೇಶ್ವರಿ ಸಮಿತಿಯ ಮೂವತ್ತಕ್ಕೂ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು.
ನಂತರ ಮಧ್ಯಾಹ್ನದ ನಂತರದ ಅವಧಿಯಲ್ಲಿ ಪ್ರಸ್ತುತ ಅಡಿಕೆ ಬೆಳೆಗಾರರನ್ನು ತೀವ್ರತರದಲ್ಲಿ ಕಾಡುತ್ತಿರುವ ಭಯಾನಕ ರೋಗ ಅಡಿಕೆ ಎಲೆ ಚುಕ್ಕೆರೋಗದ ಬಗ್ಗೆ ಸಿದ್ದಾಪುರದ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರಾದ ಅರುಣ್ ಹಾಗೂ ಇಲಾಖೆ ಸಿಬ್ಬಂದಿಗಳಾದ ಕಾಶೀನಾಥ ಸಂಪೂರ್ಣವಾಗಿ ಮಾಹಿತಿ ನೀಡಿದರು. ಹಾಗೆಯೇ ಊರಿನ ಅಡಿಕೆ ತೋಟಗಳಿಗೆ ರೈತರ ಜೊತೆ ಭೇಟಿ ನೀಡಿ ಗಿಡಮರಗಳನ್ನು ಪರಿಶೀಲಿಸಿ ಎಲೆಚುಕ್ಕೆ ರೋಗದ ಬಗ್ಗೆ ಮತ್ತು ಇತರೇ ರೋಗಗಳ ಬಗೆಗೆ ಸಮಗ್ರವಾಗಿ ಮಾಹಿತಿ ನೀಡಿ, ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು. ನಂತರ ಯಮುನಾ ನಾಗೇಶ ಹೆಗಡೆ ಮನೆಯಂಗಳದಲ್ಲಿ ಎಲೆಚುಕ್ಕೆ ಬಗ್ಗೆ ಮಾಹಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ರಮೇಶ ನಾ. ನಾಯ್ಕ ಬಾಳೇಕೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರಾದ ಅರುಣ್, ತ್ಯಾಗಲಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಸಚ್ಚಿದಾನಂದ ಜಿ. ಹೆಗಡೆ ಬೆಳಗದ್ದೆ, ಎ.ಜಿ.ನಾಯ್ಕ ಹಂಗಾರಖಂಡ, ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ,ಊರಿನ ಪ್ರಮುಖರಾದ ಎಮ್.ಎಮ್. ಹೆಗಡೆ ಹಂಗಾರಖಂಡ, ತೋಟಗಾರಿಕೆ ಇಲಾಖೆ ಸಿಬ್ಬಂದಿಗಳಾದ ಕಾಶೀನಾಥ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಭೆಯಲ್ಲಿ ಹಂಗಾರಖಂಡ ಸೇವಾ ಸಮಿತಿಯ ಮೂವತ್ತಕ್ಕೂ ಹೆಚ್ಚಿನ ಸದಸ್ಯರು,ರೈತರು ಪಾಲ್ಗೊಂಡಿದ್ದರು. ಸಭೆಯ ಸ್ವಾಗತ ಮತ್ತು ನಿರೂಪಣೆಯನ್ನು ನಟರಾಜ ಎಮ್ ಹೆಗಡೆ ನಡೆಸಿಕೊಟ್ಟರೆ, ಪ್ರಾಸ್ತಾವಿಕ ನುಡಿಯನ್ನು ರಮೇಶ ಟಿ ನಾಯ್ಕ ನುಡಿದರು. ವಂದಾರ್ಪಣೆಯನ್ನು ನಾಗರಾಜ ರಾಮಾ ನಾಯ್ಕ ಅವರು ನಡೆಸಿದರು.
ಒಟ್ಟಾರೆಯಾಗಿ ಹೇಳುವುದಾದರೇ ಹಂಗಾರಖಂಡ ಚಿಕ್ಕ ಊರಾದರೂ ತಾಲೂಕಿಗೆ ಮಾದರಿ ಗ್ರಾಮ ಎನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಬಹುದಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಗಾದೆ ಮಾತಿಗೆ ಹಂಗಾರಖಂಡ ತಕ್ಕದಾದುಗಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.