ದಾಂಡೇಲಿ: ನಗರದ ಎಆರ್‌ಟಿಓ ಕಾರ್ಯಾಲಯದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಯು.ಎಸ್.ಪಾಟೀಲ್, ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿಯನ್ನು ವಹಿಸುತ್ತೇವೆಯೋ ಅಷ್ಟೇ ನಮ್ಮ ನಮ್ಮ ವಾಹನಗಳ ಬಗ್ಗೆಯೂ ಕಾಳಜಿಯನ್ನು ವಹಿಸಬೇಕು. ಸಾರಿಗೆ ಇಲಾಖೆಯ ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಬೇಕು ಅವಶ್ಯ ಸಂದರ್ಭದಲ್ಲಿ ಮಾತ್ರ ವಾಹನಗಳನ್ನು ಬಳಸುವ ನಿಟ್ಟಿನಲ್ಲಿ ನಾವು ಮುಂದಾಗಬೇಕು. ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ನಾವೆಲ್ಲರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.
ಕನ್ಯಾ ವಿದ್ಯಾಲಯದ ಪ್ರಾಚಾರ್ಯರಾದ ಹನುಮಂತ ಕುಂಬಾರ್ ಅವರು ಮಾತನಾಡಿ ನಮ್ಮ ನಿಷ್ಕಾಳಜಿ ಮಾಲಿನ್ಯ ಉದ್ಭವವಾಗಲು ಕಾರಣ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾಳಜಿಯನ್ನು ಹೊಂದಿರಬೇಕು. ಆರೋಗ್ಯವಂತ ಸಮಾಜ ನಿರ್ಮಾಣದ ಆಶಯದೊಂದಿಗೆ ಬದುಕು ನಡೆಸಬೇಕೆಂದು ಕರೆ ನೀಡಿದರು.
ಸಾರಿಗೆ ನಿರೀಕ್ಷಕ ವೈ.ಎನ್.ಮಸರಕಲ್ಲ ಅವರು ಸಂಚಾರಿ ನಿಯಮಗಳನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸಬೇಕು. ನಾವು ನಮ್ಮ ಕರ್ತವ್ಯಗಳನ್ನು ಅರಿತು ನಡೆದಾಗ ಮಾತ್ರ ಮಾಲಿನ್ಯ ನಿಯಂತ್ರಣವಾಗಲು ಸಾಧ್ಯ ಎಂದರು. ವೇದಿಕೆಯಲ್ಲಿ ಎಆರ್‌ಟಿಓ ಕಾರ್ಯಾಲಯದ ಎಸ್.ಎಂ.ಖಾಜಿ, ಮಂಜುನಾಥ್ ಮುನವಳ್ಳಿ, ರವಿ ಮೇದಾರ್ ಮೊದಲಾದವರು ಉಪಸ್ಥಿತರಿದ್ದರು.