ಯಲ್ಲಾಪುರ: ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಯಲ್ಲಾಪುರ ಇವರ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ನ್ಯಾಯಾಲಯದ ಆವರಣದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್, ಒಂದು ದೇಶದ ಆರ್ಥಿಕ ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸರ್ಕಾರ, ನಾಗರಿಕರು ಮತ್ತು ಖಾಸಗಿ ವಲಯದಂತಹ ಸಂಘಟಿತವಾಗಿ ಕೆಲಸ ಮಾಡಬೇಕಾಗುತ್ತದೆ. ಭ್ರಷ್ಟಾಚಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಆತಂಕಕಾರಿ ವಿಷಯವಾಗಿದೆ. ಭ್ರಷ್ಟಾಚಾರದಿಂದ ಉಂಟಾಗುವ ಗಂಭೀರ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮಗಳು ನಡೆಸಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ವಕೀಲ ಜಿ.ಎಸ್.ಭಟ್ ಹಳವಳ್ಳಿ, ಭ್ರಷ್ಟಾಚಾರವು ದೇಶದ ಸಂಪೂರ್ಣ ಸಾಮಾಜಿಕ ರಚನೆಯನ್ನು ಹರಿದು ಹಾಕುವ ಸಾಮರ್ಥ್ಯ ಹೊಂದಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕಟ್ಟುನಿಟ್ಟಾದ ಕಾನೂನು ಜಾರಿ ಮಾಡಬೇಕು. ಅಂದಾಗ ಅದರ ಪ್ರಭಲತೆಯನ್ನು ಕಡಿಮೆ ಮಾಡಬಹುದು. ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ, ನಿಯಂತ್ರಿಸುವುದು ಅನಿವಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ ವಹಿಸಿದ್ದರು. ವಕೀಲರಾದ ಪ್ರಕಾಶ್ ಭಟ್ ಸ್ವಾಗತಿಸಿದರು. ಶಿರಸ್ತೇದಾರ ರಾಮಚಂದ್ರ ಉಳ್ವೇಕರ್ ಪ್ರತಿಜ್ಞಾ ವಿಧಿ ಬೋಧಿಸಿದರು, ಪ್ಯಾರಾ ಲೀಗಲ್ ವಾಲೆಂಟಿಯರ್ ಸುಧಾಕರ ನಾಯಕ್ ನಿರ್ವಹಿಸಿ ವಂದಿಸಿದರು. ಸಹಾಯಕ ಸರಕಾರಿ ವಕೀಲ ಜೀನತ್ ಭಾನು ಶೇಕ್, ವಕೀಲರಾದ ಗಣೇಶ್ ಪಾಠಣಕರ, ಆರ್.ಕೆ.ಭಟ್, ಎಂ.ಕೆ.ಭಟ್ ಉಪಸ್ಥಿತರಿದ್ದರು.