ಹಳಿಯಾಳ: ತಾಲೂಕಿನ ಸಾಂಬ್ರಾಣಿ ಗ್ರಾಮದ ಹುಸೇನಾಬಿ ಬುಡ್ಡೆಸಾಬ್ ಸಿದ್ದಿ ಅವರು ದಮಾಮಿ ನೃತ್ಯ ಕ್ಷೇತ್ರದಲ್ಲಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
ಶತಾಯುಷಿ ಹುಸೇನಾಬಿ ಅವರಿಗೆ ಈ ಹಿಂದೆ ಕರ್ನಾಟಕ ಜನಪದ ಅಕಾಡೆಮಿ 2019ನೇ ಸಾಲಿಗೆ ವಾರ್ಷಿಕ ಪ್ರಶಸ್ತಿ ನೀಡಿ ಕೂಡ ಗೌರವಿಸಲಾಗಿತ್ತು. ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಜಾನಪದ ಸಂಗೀತದಲ್ಲಿ ಸಾಮಾಜಿಕ ಸೇವೆ ಸಲ್ಲಿಸಿರುವ ಇವರು, ಬುಡಕಟ್ಟು ಸಿದ್ದಿ ಸಮುದಾಯದ ಹಿರಿಯ ಜೀವ; ಇವರಿಗೆ ಈಗ 103 ವರ್ಷ ವಯಸ್ಸು.
ಸಾಂಬ್ರಾಣಿ ಗ್ರಾಮದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಾಣಂತಿಯರ ಕಾರ್ಯಕ್ರಮ, ಇತರೆ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿ ಜಾನಪದ ಗೀತೆಗಳನ್ನು ಹಾಡಿ ಸಂಗೀತ ನೃತ್ಯ ಕ್ಷೇತ್ರದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.