ಹಳಿಯಾಳ: ಪಟ್ಟಣದ ಕೆಎಲ್‌ಎಸ್ ವಿಡಿಐಟಿ ವಿದ್ಯುನ್ಮಾನ ಹಾಗೂ ಸಂಪರ್ಕ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳು ಇಂಡಿಯಾ ಮೊಬೈಲ್ ಕಾಂಗ್ರೆಸ್- 2023ರ ಉದ್ಘಾಟನಾ ಸಮಾರಂಭಕ್ಕೆ ಧಾರವಾಡದ ಐಐಐಟಿಗೆ ಭೇಟಿ ನೀಡಿದರು.
ಇಂಡಿಯಾ ಮೊಬೈಲ್ ಕಾಂಗ್ರೆಸ್- 2023ರಲ್ಲಿ 100 5ಜಿ ಬಳಕೆಯ ಸಂದರ್ಭಗಳೆ0ಬ ಪ್ರಯೋಗಾಲಯದ ಪ್ರಶಸ್ತಿಯನ್ನು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಐಐಐಟಿ ಧಾರವಾಡಕ್ಕೆ ಆನ್ಲೈನ್ ಮೂಲಕ ಪ್ರದಾನ ಮಾಡಲಾಯಿತು. ಈ ಪ್ರಯೋಗಾಲಯದ ವಿವಿಧ ಸೌಲಭ್ಯಗಳ ಬಗ್ಗೆ ಅರಿತುಕೊಳ್ಳುವ ಹಾಗೂ ಇದರ ಮುಖಾಂತರ ಹೊಸ ನಿಯೋಜನೆಗಳನ್ನು ಹುಟ್ಟು ಹಾಕುವ ಉದ್ದೇಶದ ಜೊತೆಗೆ ಇನ್ನೂ ಹೆಚ್ಚು ಸಂಶೋಧನಾ ಕಾರ್ಯಕ್ರಮಗಳ ರೂಪರೇಷೆಗಳ ಕುರಿತು ವಿಡಿಐಟಿ ಮತ್ತು ಐಐಐಟಿ ಪ್ರಾಧ್ಯಾಪಕರು ಚರ್ಚೆ ನಡೆಸಿದರು.
ಇದರ ಜೊತೆಗೆ ವಿಧ್ಯಾರ್ಥಿಗಳು ಐಐಐಟಿಯಲ್ಲಿ ಸ್ಥಾಪಿಸಿರುವ ವಿವಿಧ ವಿದ್ಯುನ್ಮಾನ ಪ್ರಯೋಗಾಲಯಗಳಿಗೆ ಭೇಟಿ ನೀಡಿ ನವೀನ ತಂತ್ರಜ್ಞಾನದ ವಿಷಯಗಳಾದ ಕೃತಕ ಬುದ್ಧಿವಂತಿಕೆ, ಯಂತ್ರ ಕಲಿಕೆ ಹಾಗೂ ಧ್ವನಿ ನಿಯಂತ್ರಿತ ರೋಬೋಟ್ಸ್ ಹತ್ತು ಹಲವಾರು ನಿಯೋಜನೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಸಫಲರಾದರು. ವಿಡಿಐಟಿ ವಿದ್ಯುನ್ಮಾನ ಹಾಗೂ ಸಂಪರ್ಕ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ರೋಹಿಣಿ ಕಲ್ಲೂರ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಮಹೇಂದ್ರ ಮ.ದೀಕ್ಷಿತ್ ವಿದ್ಯಾರ್ಥಿಗಳೊಡನೆ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಪ್ರಾಂಶುಪಾಲರಾದ ಡಾ.ವಿ.ಎ.ಕುಲಕರ್ಣಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.