ಯಲ್ಲಾಪುರ: ಶ್ರೀಮಂತಿಕೆ, ಸಂಪತ್ತು, ಅಧಿಕಾರ ಎಲ್ಲಾ ಇದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ, ಇವು ಯಾವವು ಕೂಡ ಮನುಷ್ಯನಿಗೆ ಪ್ರಯೋಜನಕ್ಕೆ ಬಾರದು, ಉತ್ತಮ ಆರೋಗ್ಯ ಹೊಂದಬೇಕಾದರೆ, ಕ್ರೀಡೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ಅವರು ಕಾಳಮ್ಮನಗರ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಯ ವಿಭಾಗ ಮಟ್ಟದ ಕ್ರೀಡಾಕೂಟವನ್ನು ಕ್ರೀಡಾದ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆಗೆ ಮತ್ತು ಅರಣ್ಯ ಇಲಾಖೆಗೆ ಅವಿನಾಭಾವ ಸಂಬ0ಧವಿದೆ. ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ದಿ.ಪುನೀತ್ ರಾಜಕುಮಾರ್ ಎಲ್ಲರಿಗೂ ಮಾದರಿಯಾಗಬೇಕು. ತಮ್ಮ ಕ್ರೀಡಾ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿ ಈ ವಿಭಾಗಕ್ಕೆ ಕೀರ್ತಿ ತರುವಂತವರಾಗಿ ಎಂದು ಅವರು ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮಾತನಾಡಿ, ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬಹುದಿನದ ಬೇಡಿಕೆಯನ್ನು ಅನುಗುಣವಾಗಿ ಇಲಾಖೆ 1991 ರಿಂದ ಅರಣ್ಯ ಇಲಾಖೆ ಮಟ್ಟದ ಕ್ರೀಡಾಕೂಟವನ್ನು ಪ್ರಾರಂಭಿಸಿತು. ವಿಭಾಗ ವೃತ್ತ ಹಾಗೂ ರಾಜ್ಯಮಟ್ಟದ ಹಂತದಲ್ಲಿ ಕ್ರೀಡಾಕೂಟ ನಡೆಯುತ್ತದೆ. ನಮ್ಮ ಇಲಾಖೆಯಲ್ಲಿರುವ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಇಲಾಖೆಯಲ್ಲಿರುವ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆ ಅಷ್ಟೇ ಉತ್ತೇಜನ ನೀಡುತ್ತದೆ. ಕ್ರೀಡಾ ಮನೋಹದಿಂದ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ವಿಭಾಗಕ್ಕೆ ಉತ್ತಮ ಹೆಸರು ತರುವಂತೆ ಅವರು ಹಾರೈಸಿದರು.
ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹಿಮವತಿ ಭಟ್, ರವಿ ಹುಲಕೋಟಿ, ಅಶೋಕಬಾಬು, ದೈಹಿಕ ಶಿಕ್ಷಕರಾದ ಎನ್ ಆರ್ ನಾಯಕ, ವಿನೋದ ನಾಯಕ ವೇದಿಕೆಯಲ್ಲಿದ್ದರು. ಕಾತುರ, ಕಿರವತ್ತಿ, ಇಡಗುಂದಿ, ಮುಂಡಗೋಡ, ಮಂಚಿಕೇರಿ ಹಾಗೂ ಯಲ್ಲಾಪುರ ಅರಣ್ಯ ವಲಯದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಎಸಿಎಫ್ ಆನಂದ ಎಚ್.ಎ. ಸ್ವಾಗತಿಸಿದರು. ಅರಣ್ಯ ಸಿಬ್ಬಂದಿ ಶಹನವಾಜ ಮುಲ್ತಾನಿ ಪ್ರಾರ್ಥಿಸಿದರು. ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಅರಣ್ಯ ಸಿಬ್ಬಂದಿ ಶ್ರೀಶೈಲ್ ಐನಾಪುರ ನಿರೂಪಿಸಿ, ಪ್ರತಿಜ್ಞಾವಿಧಿ ಭೋದಿಸಿದರು. ಆರ್‌ಎಫ್‌ಒ ಮಂಜುನಾಥ ನಾಯ್ಕ ವಂದಿಸಿದರು.