ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ರೀಲ್ಸ್ ಮಾಡಲು ಹೋಗಿ ಹಲವರನ್ನು ಅಪಾಯಕ್ಕೆ ಸಿಲುಕಿಸುವ ಕಾರ್ಯವನ್ನು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಮಾಡಿದ್ದು ಸದ್ಯ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಇಲ್ಲಿನ ತೆಂಗಿನಗುಂಡಿ ಕ್ರಾಸ್ ನಿಂದ ಹೋಂಡಾ ಆಕ್ಟಿವಾ ಬೈಕಿನಲ್ಲಿ ಅಪ್ರಾಪ್ತ ಬಾಲಕ (ಸುಮಾರು 8 ವರ್ಷ)ನನ್ನು ಮುಂದೆ ಕೂರಿಸಿಕೊಂಡು ಇಬ್ಬರು ಯುವಕರು ಬೈಕಿನಲ್ಲಿ ಕುಳಿತು ರೀಲ್ಸ್ ಮಾಡುತ್ತಿದ್ದು ಅಕ್ಕ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನವರೇ ಕಂಗಾಲಾದ ಘಟನೆ ನಡೆಯಿತು. ಸುಮಾರು 80 ಕಿ.ಮಿ. ವೇಗದಲ್ಲಿ ಬೈಕ್ ಓಡಿಸುತ್ತಾ ಬೈಕಿನ ಹ್ಯಾಂಡಲ್‌ನ್ನು ಎದುರು ಕುಳಿತಿದ್ದ ಪುಟ್ಟ ಬಾಲಕನ ಕೈಗೆ ಕೊಟ್ಟು ಚಾಲಕನ ಸೀಟಿನಲ್ಲಿದ್ದ ವ್ಯಕ್ತಿ ಎರಡೂ ಕೈಗಳನ್ನು ನೇರವಾಗಿಸಿ ರೀಲ್ಸ ಮಾಡುತ್ತಿದ್ದು ಅಕ್ಕ ಪಕ್ಕದಲ್ಲಿ ಹೋಗುತ್ತಿದ್ದ ವಾಹನ ಸವಾರರೇ ಒಮ್ಮೆ ಭಯಕ್ಕೆ ಬಿದ್ದ ಘಟನೆಯೂ ನಡೆಯಿತು. ಆದರೂ ಸಹ ತಮ್ಮ ದ್ವಿಚಕ್ರ ವಾಹನದಲ್ಲಿ ರೀಲ್ಸ್ ಮಾಡುತ್ತಾ ವೆಂಕಟಾಪುರ ಡಿವೈಡರ್‌ನಲ್ಲಿ ಮತ್ತೆ ಭಟ್ಕಳದ ಕಡೆಗೆ ತಿರುಗಿದ ದ್ವಿಚಕ್ರ ವಾಹನ ಸವಾರರು ರೀಲ್ಸ್ ಮಾಡುತ್ತಲೇ ಮುಂದೆ ಸಾಗಿದ್ದು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಂತಹ ಕೃತ್ಯವನ್ನು ಎಳವೆಯಲ್ಲಿಯೇ ಚಿವುಟಿ ಹಾಕದೇ ಇದ್ದಲ್ಲಿ ಮುಂದೆ ದೊಡ್ಡ ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.