ಹೊನ್ನಾವರ: ಸುರಕ್ಷತೆ ಇಲ್ಲದೆ ಪ್ರವಾಸಿ ಬೋಟಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಇಬಿ ಪಿಂಚಣಿದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಡಿ.ಡಿ.ಮಡಿವಾಳ ಒತ್ತಾಯಿಸಿದ್ದಾರೆ.
ರಜಾ ಸಮಯದಲ್ಲಿ ಪ್ರವಾಸಿಗರ ದಂಡು ಪ್ರವಾಸಿ ತಾಣಗಳಲ್ಲಿ ಹಿಂಡುಹಿಂಡಾಗಿ ಬರುತ್ತಿದೆ. ಅದರಲ್ಲೂ ಕಾಸರಕೋಡನಲ್ಲಿರುವ ಇಕೋ ಬೀಚ್ ಮತ್ತು ಕಾಂಡ್ಲಾವನ ನಡಿಗೆ ಜೊತೆ ಬೋಟ್ ರೈಡಿಂಗ್ ಕೂಡಾ ಪ್ರವಾಸಿಗರ ಆಕರ್ಷಣಾ ಚಟುವಟಿಕೆಯಾಗಿದೆ. ಆದರೆ ಈಗಿತ್ತಲಾಗಿ ಪ್ರಿ-ವೆಡ್ಡಿಂಗ್ ಶೂಟಿಂಗ್ ಕೂಡ ಒಂದು ಫ್ಯಾಷನ್ ಆಗಿ ಪರಿಣಮಿಸಿದೆ. ಕಾಂಡ್ಲಾವನ ವೀಕ್ಷಣೆ ಆಕರ್ಷಣೀಯವಾದರೂ ಪ್ರವಾಸಿಗರ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಎಂಟು ಜನ ಕುಳಿತುಕೊಳ್ಳುವ ಡಿಂಗಿಗಳು ಹೆಸರಿಗೆ ಮಾತ್ರ ಲೈಫ್ ಜಾಕೆಟ್ ಹೊಂದಿದ್ದು, ಜಾಕೆಟ್ ಇಲ್ಲದೇ ರೈಡಿಂಗ್ ಮಾಡುವುದನ್ನು ಕಾಣಬಹುದು. ಮನೋರಂಜನೆಗಾಗಿ ಮಾಡುವ ಇಂತಹ ಡಿಂಗಿ ಕುಣಿತ ಪ್ರವಾಸಿಗರ ಪ್ರಾಣಕ್ಕೆ ಕಾರಣ ಆಗಬಹುದು. ಕೇವಲ 20 ನಿಮಿಷದ ಕಾಂಡ್ಲಾವನ ಪ್ರದಕ್ಷಿಣೆಗೆ ಯಾವುದೇ ಅಧಿಕೃತ ರಸೀದಿ ಇಲ್ಲದೇ ಒಬೊಬ್ಬ ಪ್ರವಾಸಿಗರಿಂದ 100 ರೂಪಾಯಿ ಸ್ವೀಕರಿಸುವ ಬೋಟ್ ಮಾಲೀಕರು ಯಾವುದೇ ಅವಘಡ ಸಂಭವಿಸಿದಲ್ಲಿ ಅದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಭದ್ರಾತಾ ವ್ಯವಸ್ಥೆ ಇಲ್ಲದ ಇಂತಹ ಬೋಟ್‌ಗಳಿಗೆ ಅರಣ್ಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.