ಯಲ್ಲಾಪುರ: ದಿವಂಗತ ತಿಮ್ಮಪ್ಪ ಭಾಗವತ್ ಬಾಳೆಹದ್ದ ವೇದಿಕೆ, ರಾಜರಾಜೇಶ್ವರಿ ಯಕ್ಷಗಾನ ಸಂಸ್ಥೆ ಮಂಚಿಕೇರಿ ಹಾಗೂ ಯಕ್ಷ ಕೌಮುದೀ ಟ್ರಸ್ಟ್ ಶ್ರೀರಂಗಪಟ್ಟಣ ಇವುಗಳ ಸಹಯೋಗದಲ್ಲಿ 24ನೇ ವರ್ಷದ ತಾಳಮದ್ದಲೆ ಕಾರ್ಯಕ್ರಮ ತಾಲೂಕಿನ ಮಂಚೀಕೇರಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಅ.31ರಂದು ಮಧ್ಯಾಹ್ನ ನಡೆಯಲಿದೆ.
ಈ ಸಂದರ್ಭದಲ್ಲಿ ಪ್ರಸ್ತುತಗೊಳ್ಳಲಿರುವ ‘ಭೀಮಾಂಜನೇಯ’ ಆಖ್ಯಾನದ ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೇಗದ್ದೆ, ನಾರಾಯಣ ಭಾಗ್ವತ ಬಾಳೆಹದ್ದ, ಮದ್ದಲೆ ವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಹಾಗೂ ಅರ್ಥಧಾರಿಗಳಾಗಿ ವಾಸುದೇವ ಭಟ್ಟ ಮದೂರು, ಗಣರಾಜ ಕುಂಬ್ಳೆ, ರಾಮಕುಂಜ, ಗ.ನಾ ಭಟ್ಟ ಮೈಸೂರು ಹಾಗೂ ಹರೀಶ ಬಳಂತಿಮಗರು ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ನಡೆಯುವ ಯಕ್ಷ ಕೌಮುದೀ ಟ್ರಸ್ಟಿನ ದಶಾಹ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ವಹಿಸುವರು. ಅತಿಥಿಗಳಾಗಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ರಾ.ರಾ. ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ಜಿ.ಟಿ ಭಟ್ಟ ಬೊಮ್ಮನಳ್ಳಿ ಆಗಮಿಸುವರು.
ಯಕ್ಷರಂಗ ಮಾಸಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ ಸಮಾರೋಪ ಭಾಷಣ ಮಾಡಲಿದ್ದು, ಯಕ್ಷ ಕೌಮುದೀ ಟ್ರಸ್ಟ ಅಧ್ಯಕ್ಷ ಗ.ನಾ ಭಟ್ಟ ಉಪಸ್ಥಿತರಿರುವರು. ರಾ.ಯ.ಸಂ. ಕಾರ್ಯದರ್ಶಿ ವಿಶ್ವನಾಥ ಹೆಗಡೆ ಬಾಮಣಕೊಪ್ಪ ಸ್ಥಳೀಯ ಸೇ.ಸ ಸಂಘದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ.