ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆ ಹೇಳಿಕೆ ಸಕ್ಕರೆ ನೋಡಿದರೆ ಅವರೇ ಕಾರ್ಖಾನೆ ರಕ್ಷಕರಂತೆ ಕಾಣುತ್ತಿದ್ದಾರೆ. ನೀವು ಶಾಸಕರು ಎಂಬುದನ್ನು ಮರೆಯಬೇಡಿ, ರೈತರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಕಿಡಿಕಾರಿದ್ದಾರೆ.
ಕಬ್ಬು ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಎಫ್‌ಆರ್‌ಪಿ ದರ ರೈತರಿಗೆ ನಷ್ಟವಾಗುತ್ತದೆ. ಹೆಚ್ಚು ಬೆಲೆ ನೀಡಬೇಕು, ಕಳೆದ ವರ್ಷದ 150 ರೂ. ಬಾಕಿ ಕೊಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಕಡಿಮೆ ಮಾಡಬೇಕು ಎಂದು ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದರೆ, ಶಾಸಕರು ಹೋರಾಟವನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಇವರ ಸರ್ಕಾರ ಅಧಿಕಾರದಲ್ಲಿದೆ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಪಾಠ ಹೇಳಿ ರೈತರಿಗೆ ಹೆಚ್ಚಿನ ಬೆಲೆ ಕೊಡಿಸಲಿ, ಆಗ ಶಾಸಕರ ಜವಾಬ್ದಾರಿ ಜನ ಮೆಚ್ಚುತ್ತಾರೆ ಎಂದಿದ್ದಾರೆ.
ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿ 100- 200ರೂ. ಕೊಡುತ್ತಿದ್ದಾರೆ. ಅದೇ ರೀತಿ ಪ್ಯಾರಿ ಕಾರ್ಖಾನೆಯವರಿಗೂ ಹೆಚ್ಚು ಬೆಲೆ ಕೊಡಲು ತಿಳಿಸಲಿ. ಕಳೆದ ವರ್ಷ ಕಟಾವು ಸಾಗಾಣಿಕೆ ವೆಚ್ಚವನ್ನು ಹೆಚ್ಚು ಹಣ ಕಡಿತ ಮಾಡಿಕೊಂಡಿರುವುದನ್ನು ರೈತರಿಗೆ ಕೂಡಿಸಲಿ, ಆಗ ಇವರನ್ನು ಮೆಚ್ಚುತ್ತೇವೆ. ಹೋರಾಟ ಹತ್ತಿಕ್ಕಲು ಯತ್ನಿಸಬಾರದು. ವಾಮಮಾರ್ಗ ಬಳಸಿದರೆ ಸರ್ಕಾರಕ್ಕೆ ಮತ್ತು ಶಾಸಕರಿಗೆ ರಾಜ್ಯಾದ್ಯಂತ ಇರುವ 30 ಲಕ್ಷ ಕಬ್ಬು ಬೆಳೆಗಾರರು ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಬ್ಬು ಬೆಳೆಗಾರ ರೈತರು ಸಹ ಕಬ್ಬು ಕಟಾವಿನ ಬಗ್ಗೆ ಆತಂಕಗೊಳ್ಳಬಾರದು. ಈ ವರ್ಷ 50ರಷ್ಟು ಕಬ್ಬು ಕಡಿಮೆಯಾಗಿದೆ. ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಖರೀದಿ ಮಾಡಲು ಮುಂದೆ ಬರುತ್ತಿದ್ದಾರೆ. ಆದ್ದರಿಂದ ಸಂಘಟಿತ ಹೋರಾಟಕ್ಕೆ ಬೆಂಬಲ ಕೊಡಿ, ರೈತರಿಗೆ ನ್ಯಾಯ ಸಿಗುತ್ತದೆ ಎಂದು ಮನವಿ ಮಾಡಿದ್ದಾರೆ.