ಹಳಿಯಾಳ: ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವರು ಕಾಸಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಶಾಸಕರು ನೀಡಿರುವ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶಾಸಕರು ಮಾತನಾಡಬೇಕಾದರೆ ನಾಲಿಗೆ ಮೇಲೆ ಹಿಡಿತ ಇರಬೇಕಾಗಿತ್ತು. ಅವರ ವಯಸ್ಸಿಗೆ ಇದು ಶೋಭೆ ತರುವಂಥದ್ದಲ್ಲ. ಇವರಲ್ಲಿ ಏನು ನೋಡಿಕೊಂಡು ಒಳ್ಳೆಯ ಸಂಸದೀಯ ಪಟು ಪ್ರಶಸ್ತಿ ನೀಡಿದ್ದಾರೆ ತಿಳಿಯುತ್ತಿಲ್ಲ. ಇದು ಈ ನಾಡಿನ ಎಲ್ಲ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಹಿರಿಯ ರೈತ ಮುಖಂಡ ನಾಗೇಂದ್ರ ಜಿವೋಜಿ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಇಷ್ಟು ವರ್ಷದ ನಮ್ಮ ಹೋರಾಟದಲ್ಲಿ ಶಾಸಕರ ವಿರುದ್ಧ ಎಲ್ಲಿಯೂ ತಪ್ಪಿಯೂ ಟೀಕಿಸಿಲ್ಲ. ಆದರೆ ಇವತ್ತು ಈ ನಮ್ಮ ಪವಿತ್ರ ಹೋರಾಟಕ್ಕೆ ಅವಮಾನ ಮಾಡಿದ್ದು ನಮಗೆ ತೀವ್ರ ನೋವು ತಂದಿದೆ. ಇವರಿಗೆ ಈ ಅನ್ನದಾತರ ಮೇಲೆ ನಿಜವಾಗಿ ಕಾಳಜಿ ಇದ್ದರೆ ಕಾರ್ಖಾನೆಯವರನ್ನು ಮತ್ತು ಹೋರಾಟಗಾರರನ್ನು ಕರೆಸಿ ತಮ್ಮ ಮದ್ಯಸ್ಥಿಕೆಯಲ್ಲಿ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ನೀಡಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗಲೂ ಸಮಯ ಮಿಂಚಿಲ್ಲ. ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕಾಗಿ ಆಶಿಸುತ್ತೇವೆ.
ಯಾವ ಸೊಸಾಯಿಟಿಯಿಂದ ನಾನಾಗಲಿ, ನಮ್ಮ ಸಂಘದ ಅಧ್ಯಕ್ಷ ಶಂಕರ ಕಾಜಗಾರರಾಗಲಿ ರೈತ ಹೋರಾಟಕ್ಕೆ ಬೆಂಬಲವಾಗಿ ನಯಾಪೈಸೆ ಪಡೆದಿದ್ದೇವೆ ಎಂದು ಮಡಿಯಲ್ಲಿ ಬಂದು ಶ್ರೀತುಳಜಾ ಭವಾನಿ ಎದುರಿಗೆ ಪ್ರಮಾಣ ಮಾಡಿ ನಿರೂಪಿಸಲಿ, ನಾವು ಕೂಡ ಪಡೆದಿಲ್ಲ ಎಂದು ಪ್ರಮಾಣ ಮಾಡಲಿಕ್ಕೆ ತಯಾರಿದ್ದೇವೆ. ಇದು ನಮ್ಮ ಸವಾಲು. ಇಲ್ಲವೆಂದರೆ ಶಾಸಕರು ಇಂತಹ ಬೇಜವಾಬ್ದಾರಿ ಮತ್ತು ಅಧಿಕಾರ ದುರುಪಯೋಗದ ಕಾರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ತಾಲೂಕಾಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, ಕಾರ್ಖಾನೆ ಕಾಮಧೇನು, ಇದು ನಿಜ. ಆದರೆ ರೈತರು ಇವರ ಗುಲಾಮರೇ? ಆ ರೈತನಿಗೆ ಗೌರವ ನೀಡಬೇಕು. ಅವನ ದುಡಿಮೆಗೆ ತಕ್ಕ ಬೆಲೆ ನೀಡಬೇಕು. ಇಂತಹ ನ್ಯಾಯೋಚಿತ ಹಕ್ಕನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಕೇಳುತ್ತಿದೆ. ಇದು ತಪ್ಪಾ? ಎಂದು ಪ್ರಶ್ನಿಸಿದರು. ಎಚ್ ಆಂಡ್ ಟಿ ರೂ.893 ತೀರಾ ಹೆಚ್ಚು ಮತ್ತು ಅದರ ಜೊತೆ ಲಗಾಣಿ ನೀಡಬೇಕು. ಇದು ಅತಿಯಾಯಿತು ಎಂದು ಅಧಿಕಾರಿಗಳನ್ನೊಳಗೊಂಡು ಎಲ್ಲರೂ ಹೇಳಬೇಕಾದರೆ, ಇದು ಶಾಸಕರಿಗೆ ಯಾಕೆ ಅರ್ಥ ಆಗುತ್ತಿಲ್ಲ? ಕಾರ್ಖಾನೆ ಮೇಲೆ ಕುರುಡು ಪ್ರೇಮವೆ? ಅಥವಾ ಅದರಲ್ಲಿಯೂ ಪಾಲಿದೆಯೇ? ಎಂದು ಪ್ರಶ್ನಿಸಿದರು.
ಹಿರಿಯ ರೈತ ಮುಖಂಡ ಸುರೇಶ ಶಿವಣ್ವವರ ಮಾತನಾಡಿ, ಕಾರ್ಖಾನೆ ಯಾರು ಬಂದ್ ಮಾಡುತ್ತಾರೆ ನೋಡುತ್ತೇನೆ ಎಂದು ಸವಾಲು ಹಾಕಿ ಎಲ್ಲ ಅಧಿಕಾರವನ್ನು ಬಳಸಿ ಕಾರ್ಖಾನೆಗೆ ಅಭಯ ನೀಡುವ ಇವರಿಗೆ ಮತ ನೀಡಿದ ಮತದಾರರ (ರೈತರ) ಕಾಳಜಿ ಇಲ್ಲವೇ? ಎಂದು ಕೇಳಿದ ಅವರು, ಸಿಹಿ ಹಂಚುವ ರೈತ ಕಹಿ ನುಂಗಬೇಕಾದ ಪರಿಸ್ಥಿತಿಯನ್ನು ಕಾರ್ಖಾನೆಯವರು ತಂದೊಡ್ಡಿರುವುದು ದುರ್ಬಲ ಆಡಳಿತಶಾಹಿಯ ವೈಖರಿಯಾಗಿದೆ ಎಂದರು.
ಪ್ರತಿ ವರ್ಷ ಕಾರ್ಖಾನೆಯವರು ವಾಡಿಕೆಗಿಂತ ಒಂದು ತಿಂಗಳು ಮುಂಚಿತವಾಗಿ ಕಾರ್ಖಾನೆ ಪ್ರಾರಂಬಿಸಿ ಕಡಿಮೆ ಇಳುವರಿಯ ಕಬ್ಬು ಬೇರೆ ಕಡೆಯಿಂದ ತಂದು ನುರಿಸಿ ನಮ್ಮ ಕಬ್ಬಿನ ಇಳುವರಿ ಹೆಚ್ಚಿದ್ದರೂ ಸರಾಸರಿ ಇಳುವರಿ ಕಡಿಮೆ ಬಂದು ನಮ್ಮ ಕಬ್ಬಿನ ಬೆಲೆ ಕಡಿಮೆಯಾಗುತ್ತಿತ್ತು. ಕಳೆದ ವರ್ಷದ ನಮ್ಮ ನಿರಂತರ ಹೋರಾಟದ ಪಲವಾಗಿ ಕಾರ್ಖಾನೆ ಸರಿಯಾದ ಸಮಯದಲ್ಲಿ ಪ್ರಾರಂಭವಾಗಿದ್ದರಿಂದ ಇವತ್ತು ನಮ್ಮ ಕಬ್ಬಿನ ಬೆಲೆ ರೂ.2826 ಆಗಿದೆ. ಕಳೆದ ವರ್ಷದ ಬೆಲೆ ರೂ.2371 ಹೋಲಿಸಿದರೆ ರೂ.455 ಪ್ರತಿ ಟನ್ ಹೆಚ್ಚಾಗಿಲ್ಲವೇ? ಇದು ರೈತರಿಗೆ ಲಾಭವಲ್ಲವೇ? ಇದರ ಜೊತೆ ರೂ.150 ಪ್ರತಿ ಟನ್ ದರ ಏರಿಸಿ ನೀಡಿದ್ದು ಮತ್ತು ಸರಕಾರ ಘೋಷಿಸಿದ ರೂ.150 ಕಾರ್ಖಾನೆ ನೀಡಬೇಕಾದ ಬಾಕಿ ಇದ್ದು, ಇದು ನಮ್ಮ ಸಂಘದ ಹೋರಾಟದಿಂದ ಆಗಿದೆ. ಇದು ಶಾಸಕರಿಗೆ ತಿಳಿದಿರಲಿ ಎಂದರು.
ಎಲ್ಲರೂ ಒಕ್ಕೋರಲಿನಿಂದ ಕಾರ್ಖಾನೆಯನ್ನು ಬಂದ್ ಮಾಡುವುದು ಯಾವುದೇ ರೈತನ ಆಶಯವಲ್ಲ. ಆದರೆ ರೈತನ ಸಮಸ್ಯೆ ಏನೆಂದು ತಿಳಿದು ಕಾರ್ಖಾನೆ ಮತ್ತು ರೈತರ ನಡುವೆ ಮಧುರ ಬಾಂಧವ್ಯ ಮತ್ತು ಹೊಂದಾಣಿಕೆ ರೂಪಿಸುವುದು ಕಾರ್ಖಾನೆಯವರ ಜವಾಬ್ಧಾರಿಯಾಗಿದ್ದು ಪದೇ ಪದೇ ಇದೇ ಸಮಸ್ಯೆ ಉದ್ಭವಿಸಿ ಕಳೆದ ಹಂಗಾಮಿನಲ್ಲಿ ತೀವ್ರತರವಾದ 58 ದಿನಗಳ ಹೋರಾಟ ಕೂಡ ಸ್ಥಳೀಯ ಶಾಸಕರಿಗೆ ಮನದಟ್ಟಾಗಿಲ್ಲವೇ? ಶಾಸಕರು ಕಾರ್ಖಾನೆ ಪರ ವಕಾಲತ್ತು ವಹಿಸುವದನ್ನು ಬಿಟ್ಟು ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇ ಆದಲ್ಲಿ ತಮ್ಮ ಮೇಲಿನ ಗೌರವ ಮತ್ತು ಪ್ರೀತಿ ಇನ್ನೂ ಹೆಚ್ಚಾಗುವದರಲ್ಲಿ ಸಂಶಯ ಬೇಡ. ಈ ನಿಟ್ಟಿನಲ್ಲಿ ಶಾಸಕರು ಪ್ರಯತ್ನಿಸಿ ಪರಿಹಾರದ ಮಾರ್ಗೋಪಾಯಗಳನ್ನು ಏಕೆ ಕಂಡುಕೊಳ್ಳಬಾರದು? ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ವೇದಿಕೆ ಮತ್ತು ರೈತ ಮುಖಂಡ ಜಿ.ಡಿ.ಗಂಗಾಧರ, ಪುಂಡ್ಲಿಕ ಗೋಡಿಮನಿ, ಸುನೀಲ ಪಾಟೀಲ, ಮಹೇಶ ಪಾಳೇಕರ ಇದ್ದರು.