ಅಂಕೋಲಾ: ಹಾಲಕ್ಕಿ ಒಕ್ಕಲಿಗರು ಮುಗ್ಧರು, ತಿಳುವಳಿಕೆ ಇಲ್ಲದವರು ಎನ್ನುವ ಕಾಲ ಈಗ ಇಲ್ಲ. ಈಗ ವಿವಿಧ ಕ್ಷೇತ್ರಗಳಲ್ಲಿ ಹಾಲಕ್ಕಿ ಒಕ್ಕಲಿಗರ ಸಮಾಜದವರು ಅಭಿವೃದ್ಧಿಯನ್ನು ಹೊಂದುತ್ತಿದ್ದಾರೆ. ಶೈಕ್ಷಣಿಕ ಅರಿವಿನ ಜ್ಞಾನ ಜಾಗೃತಿಗೊಂಡಿದ್ದರಿಂದಾಗಿ ಇಂದು ಶೈಕ್ಷಣಿಕವಾಗಿಯೂ ಕೂಡ ಸಬಲರಾಗುತ್ತಿದ್ದಾರೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ತಾಲೂಕಿನ ಶಿರಕುಳಿಯ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದವರು ಹಮ್ಮಿಕೊಂಡ 11ನೇ ವರ್ಷದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ಹಾಲಕ್ಕಿ ಒಕ್ಕಗಲಿಗರ ಸಂಘದ ಅಧ್ಯಕ್ಷ ಹನುಮಂತ ಬಿ.ಗೌಡ ಮಾತನಾಡಿ, ನಮ್ಮ ಸಮಾಜವು ಎಲ್ಲ ದಿಕ್ಕಿನತ್ತ ವ್ಯಾಪಿಸಬೇಕಾದರೆ ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಹಾಗಾದಾಗ ಮಾತ್ರ ನಾವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಗು ಬಿ.ಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಮಚಂದ್ರ ಟಿ.ಗೌಡ, ನಿವೃತ್ತ ಉಪನ್ಯಾಸಕ ವಿಠೋಬ ಎಸ್. ಗೌಡ, ಶಿಕ್ಷಕಿ ವಾಸಂತಿ ರತ್ನಾಕರ ಗೌಡ ಮಾತನಾಡಿದರು. ರಾಷ್ಟ್ರ ಮಟ್ಟದ ಮಾಸ್ಟರ್ ಅಥ್ಲೆಟಿಕ್ ವಿಭಾಗದ ಕ್ರೀಡಾಪಟು ರಾಜು ಬಿ. ಗೌಡ ಅವರನ್ನು ಸನ್ಮಾನಿಸಲಾಯಿತು.
ಸಾತು ಗೌಡ ಪ್ರಾರ್ಥಿಸಿದರು. ಶಿಕ್ಷಕ ವೆಂಕಟೇಶ ಹಡವ ಸ್ವಾಗತಿಸಿದರು. ಆನಂದು ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಖರ ಗೌಡ, ಅಶೋಕ ಟಿ.ಗೌಡ ವರದಿ ವಾಚಿಸಿದರು. ಚಂದ್ರು ಗೌಡ ಸನ್ಮಾನ ಪತ್ರ ವಾಚಿಸಿದರು. ಕೆ.ಎಂ.ಗೌಡ ವಂದಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ವಿದ್ಯಾರ್ಥಿಗಳನ್ನು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.