ಶಿರಸಿ: ಬಿಎಸ್‌ಎನ್‌ಎಲ್, ಜಿಎನ್‌ಎ ಇಂಡಿಯಾ, ವೆಲ್‌ಸಾಕ್ ಜಪಾನ್ ಸಂಸ್ಥೆಯ ಒಡಂಬಡಿಕೆಯಲ್ಲಿ ಅತ್ಯಾಧುನಿಕ ಕೇಬಲ್ ಮುಕ್ತ ವೈಫೈ ತಂತ್ರಜ್ಞಾನವನ್ನು ದೇಶದಲ್ಲೇ ಶಿರಸಿಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಜಿಎನ್‌ಎ ಇಂಡಿಯಾದ ಸಿಇಓ ನಾಗರಾಜ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ಸೂಚನೆಯ ಮೇರೆಗೆ ಗುಡ್ಡ ಗಾಡು ಜಿಲ್ಲೆಯಲ್ಲಿ ಈ ತಂತ್ರಜ್ಞಾನದ ಬಳಕೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಮುಂದಡಿ ಇಡಲಾಗಿದೆ. ಕೇಬಲ್ ರಹಿತ, ತ್ವರಿತ ಇಂಟರ್‌ನೆಟ್ ಒದಗಿಸುವ ಭಾರತ್ ಏರ್‌ಫೈ ವೇಗದ ಇಂಟರ್ನೆಟ್ ಜೊತೆಗೆ ಕಡಿಮೆ ಖರ್ಚಿನಲ್ಲಿ ಬಳಸಲು ಸಾಧ್ಯತೆ ಇದೆ. ಶಿರಸಿ ನಗರದ ಟಿಎಸ್‌ಎಸ್, ಕೆಡಿಸಿಸಿ ಬ್ಯಾಂಕ್, ಟಿಆರ್‌ಸಿ ಭಾಗದಲ್ಲಿ ಪ್ರಾಯೋಗಿಕವಾಗಿ ಅವಳವಡಿಕೆ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ ಭಾರತ್ ಏರ್ ಫೈ ಎಂದು ದಾಖಲಿಸಿ ಹೆಸರು, ಮೊಬೈಲ್ ನಂಬರ್ ಮೇಲ್‌ಐಡಿ ನೀಡಿ, ಓಟಿಪಿ ದಾಖಲಿಸಿದ ಬಳಿಕ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಭಾರತ್ ಸಂಚಾರ ನಿಗಮದ ಜೊತೆಗೆ ಒಡಂಬಡಿಕೆ ಮಾಡಿಕೊಂಡು ತರಂಗಾಂತರಂಗಳನ್ನು ಹೆಚ್ಚುವರಿಯಾಗಿ ಒದಗಿಸುವ ಹಾಗೂ ಇಡೀ ವೈಫೈ ವ್ಯವಸ್ಥೆಯನ್ನು ಕಿಲೋಮೀಟರ್ ತನಕ ಬಳಸಲು ಯೋಗ್ಯವಾಗಿಸುವ ತಂತ್ರಜ್ಞಾನ ಇದಾಗಿದೆ. ಕಚೇರಿ ಹಾಗೂ ಮನೆ ಒಂದು ಕಿ.ಮೀ ಅಂತರದಲ್ಲಿ ಇದ್ದರೆ ಕಚೇರಿ ವೈಫೈ ಮನೆಗೂ ಬಳಸಲು ಅವಕಾಶ ಒದಗಿಸಲಿದೆ ಎಂಬುದು ಇದರ ವಿಶೇಷವಾಗಿದೆ ಎಂದರು.
ಲೆಕ್ಕ ಪರಿಶೋಧಕ ರವೀಂದ್ರ ಭಟ್ಟ ಮಾತನಾಡಿ, ಕೇಬಲ್ ಮುಕ್ತ ಸಂಪರ್ಕ, ಈ ತಂತ್ರಜ್ಞಾನವು ತಡೆರಹಿತ ಮತ್ತು ಕೇಬಲ್ ಮುಕ್ತ ಅನುಭವವನ್ನು ನೀಡುತ್ತದೆ. ಸಂಪರ್ಕದಲ್ಲಿ ಸಾಟಿಯಿಲ್ಲದ ಸ್ವಾತಂತ್ರ‍್ಯವನ್ನು ಒದಗಿಸುತ್ತದೆ. ಇಂಟರ್‌ನೆಟ್ ವೇಗವನ್ನು ರಾಜಿ ಮಾಡಿಕೊಳ್ಳದೇ ಅನುಭವಿಸಿ, ಸುಗಮ ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಬ್ರೌಸಿಂಗ್‌ನ್ನು ಖಚಿತಪಡಿಸುತ್ತದೆ. ನಮ್ಮ ಅತ್ಯಾಧುನಿಕ ಎನ್‌ಕ್ರಿಪ್ಯನ್ ತಂತ್ರಜ್ಞಾನವು ಸುರಕ್ಷಿತ ಮತ್ತು ರಕ್ಷಿತ ಆನ್‌ಲೈನ್, ಅನಧಿಕೃತ ಪ್ರವೇಶ ಅಥವಾ ಡೇಟಾ ಉಲ್ಲಂಘನೆಗಳಿರುವುದಿಲ್ಲ. ಹೊಸ ತಂತ್ರಜ್ಞಾನದಲ್ಲಿ ವೇಗದ ಇಂಟರ್‌ನೆಟ್‌ನ್ನು ಕಡಿಮೆ ಖರ್ಚಿನಲ್ಲಿ ಬಳಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಎನ್‌ಎ ಇಂಡಿಯಾದ ನಿರ್ದೇಶಕರಾದ ಇಥೋ, ಎಶಿಗುರೊ, ರಘು ಶಿವರಾಮಯ್ಯ, ವೆಲ್‌ಸನ್ ನಿರ್ದೇಶಕರಾದ ಎಂದೋ, ಕ್ವಾಕ್, ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಇದ್ದರು.