ಹಳಿಯಾಳ: ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎಲ್ಲರ ಸಹಕಾರದಿಂದ ಸ್ಥಾಪನೆ ಆಗಿದ್ದು, ಈ ಭಾಗದ ರೈತರಿಗೆ ಕಾಮಧೇನುವಾಗಿದೆ. ಆದರೆ ಪದೇ ಪದೇ ಅನಾವಶ್ಯಕ ಪ್ರತಿಭಟನೆಗಳಿಂದ ರೈತರಿಗೆ ಹಾನಿಯಾಗಲಿದೆ ಹೊರತು ಕಾರ್ಖಾನೆಗಲ್ಲ ಎಂಬ ಸತ್ಯವನ್ನು ರೈತರು ಅರಿತುಕೊಳ್ಳಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರ ರೈತರ ಏನೇ ಸಮಸ್ಯೆಗಳಿದ್ದರು ರೈತ ಸಂಘಟನೆಯ ಮುಖಂಡರು ಮಾತುಕತೆ, ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಪಡೆಯಲಿ. ನಾನು ಯಾವ ಸಮಯದಲ್ಲಾದರೂ ರೈತರ ಸಮಸ್ಯೆಗೆ ಸ್ಪಂದಿಸಲು ಹಾಗೂ ಸಹಕಾರ ನೀಡಲು ಸಿದ್ಧನಿದ್ದೇನೆಂದು ನುಡಿದರು.
ಕಳೆದ ವರ್ಷ ಕಬ್ಬು ಬೆಳೆಗಾರ ರೈತ ಸಂಘಟನೆಯ ಮುಖಂಡರು ಅನಾವಶ್ಯಕ ಪ್ರತಿಭಟನೆ ಮಾಡಿ ರೈತರಿಗೆ ತೊಂದರೆ ಮಾಡಿದ್ದಾರೆ. ಈ ಬಾರಿಯೂ ಕಾರ್ಖಾನೆ ಬಂದ್ ಮಾಡಲು ಪ್ರಯತ್ನಿಸಿದರೇ ಪುನಃ ರೈತರಿಗೆ ತೀವ್ರ ಹಾನಿ ಉಂಟಾಗಲಿದೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಬೇಕೆಂದರು. ಇಐಡಿ ಕಾರ್ಖಾನೆಯು ರೈತರಿಗೆ ಕಬ್ಬು ಸಂದಾಯ ಮಾಡಿದ ಎರಡು ವಾರಗಳಲ್ಲೇ ಸಂಪೂರ್ಣ ಹಣ ಪಾವತಿ ಮಾಡುತ್ತಾರೆ. ಆದರೇ ರಾಜ್ಯದ ಇತರೇ ಕಾರ್ಖಾನೆಗಳು ವರ್ಷಗಳೇ ಕಳೆದರು ಹಣ ಪಾವತಿಸದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಾರೆ. ಅಲ್ಲದೇ ಕಳೆದ ವರ್ಷ ಹಳಿಯಾಳ ಭಾಗದ ರೈತರು ಬೇರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ್ದು ಅವರಿಗೂ ಈವರೆಗೆ ಸಂಪೂರ್ಣ ಹಣ ಪಾವತಿಯಾಗಿಲ್ಲ ಇದರಿಂದ ಆ ರೈತರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ತಿಳಿದು ದುಃಖವಾಗುತ್ತಿದೆ ಎಂದರು.
ಹಳಿಯಾಳ ಸಕ್ಕರೆ ಕಾರ್ಖಾನೆಗೆ ಹಳಿಯಾಳ, ದಾಂಡೇಲಿ, ಧಾರವಾಡ, ಜೊಯಿಡಾ, ಕಲಘಟಗಿ, ಮುಂಡಗೋಡ, ಅಳ್ನಾವರ ಮೀಸಲು ಕ್ಷೇತ್ರವಾಗಿದ್ದು ಈ ಭಾಗದ ರೈತರು ಇದೇ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಬೇಕು ಎಂದು ಕರೆ ನೀಡಿದ ಶಾಸಕರು ಈ ಬಾರಿ ಹಳಿಯಾಳದಲ್ಲಿ ರಾಜ್ಯದ ವಿವಿಧ ಭಾಗಗಳ 20 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಯವರು ಹಳಿಯಾಳ ಕ್ಷೇತ್ರದಲ್ಲಿ ಕಚೇರಿ ತೆರೆದು ಹಳಿಯಾಳದ ಕಬ್ಬು ತೆಗೆದುಕೊಂಡು ಹೋಗುವ ಯೋಚನೆಯಲ್ಲಿದ್ದ ಬಗ್ಗೆ ಮಾಹಿತಿ ದೊರಕಿದ್ದು, ಇದು ಕಾನೂನು ಬಾಹಿರ ಪ್ರಕ್ರಿಯೇಯಾಗಿದೆ ಕಾರಣ ಈ ಬಗ್ಗೆ ತಹಶೀಲ್ದಾರ್ ಅವರಿಗೆ ಈ ಎಲ್ಲ ಕಚೇರಿಗಳನ್ನು ಮುಚ್ಚಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಮಳೆ ಅಭಾವದಿಂದ ಜಮೀನುಗಳಲ್ಲಿ ನೀರಿನ ತೀವ್ರ ಕೊರತೆಯಿಂದ ಭತ್ತ, ಕಬ್ಬು, ಗೋವಿನ ಜೋಳ ಬಹುತೇಕ ಎಲ್ಲ ಬೆಳೆಗಳು ಹಾನಿಗೊಳಗಾಗಿವೆ. ಕಬ್ಬಿಗೆ ನೀರಿನ ಪ್ರಮಾಣ ತೀರಾ ಕಡಿಮೆ ಆಗಿರುವುದರಿಂದ ಕಬ್ಬು ಒಣಗುತ್ತಿದೆ ಮಾತ್ರವಲ್ಲದೇ ಇಳುವರಿಯೂ ಸಾಕಷ್ಟು ಕುಂಠಿತವಾಗಿರುವುದರಿಂದ ಉಳಿದ ಕಬ್ಬು ಆದಷ್ಟು ಬೇಗ ಕಾರ್ಖಾನೆಗೆ ಹೋಗದೆ ಇದ್ದರೆ ರೈತರು ಮತ್ತೆ ಸಮಸ್ಯೆಗೆ ಸಿಲುಕಲಿದ್ದಾರೆ. ರೈತರು ತಾಳ್ಮೆ ಇಟ್ಟುಕೊಳ್ಳಿ, ನಿಮ್ಮ ನಿಮ್ಮಲ್ಲೇ ಕಬ್ಬು ಸಾಗಿಸಲು ಪೈಪೋಟಿ ಮಾಡಬೇಡಿ. ಕಬ್ಬು ಕಟಾವು ತಾಂಡಾಗಳಿಗೆ ಯಾವುದೇ ಕಾರಣಕ್ಕೂ ಲಗಾನಿ ಕೊಡಬೇಡಿ ಎಂದು ಕರೆನೀಡಿದರು.
ಬರಗಾಲ ಪಿಡಿತ ಹಳಿಯಾಳ ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ದೇಶಪಾಂಡೆ ತಿಳಿಸಿದರು