ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 10 ಚಿನ್ನ, 12 ಬೆಳ್ಳಿ ಮತ್ತು 17 ಕಂಚು ಸೇರಿದಂತೆ 39 ಪದಕಗಳನ್ನು ಪಡೆದಿದ್ದಾರೆ. ಸುಮಿತ್ ಆಂಟಿಲ್ ಪುರುಷರ ಎಫ್64 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 73.29 ಮೀಟರ್ ದೂರ ಎಸೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು, ಅದೇ ವೇಳೆ ಪುಷ್ಪೇಂದ್ರ ಸಿಂಗ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಪಟೇಲ್ ಚೀನಾದ ಗು ಕ್ಸಿಯೊಡಾನ್ ವಿರುದ್ಧ ಸೋತು ಕಂಚಿಗೆ ತೃಪ್ತಿಪಟ್ಟರು. ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಜೋಡಿ ಪ್ರಮೋದ್ ಭಗತ್ ಮತ್ತು ಮನೀಶಾ ರಾಮದಾಸ್ ಕಂಚಿನ ಪದಕವನ್ನು ಪಡೆದುಕೊಂಡರೆ, ಪುರುಷರ T35 200 ಮೀಟರ್‌ನಲ್ಲಿ ನಾರಾಯಣ್ ಠಾಕೂರ್ ಕಂಚಿನ ಪದಕವನ್ನು ಪಡೆದರು. ನಿನ್ನೆ, ಪ್ರಾಚಿ, KL2 ಇವೆಂಟ್‌ನಲ್ಲಿ ಚಿನ್ನವನ್ನು ಪಡೆದರು.
ಅಥ್ಲೆಟಿಕ್ಸ್, ಸೈಕ್ಲಿಂಗ್, ಬ್ಯಾಡ್ಮಿಂಟನ್, ಚೆಸ್ ಮತ್ತು ಬಿಲ್ಲುಗಾರಿಕೆಯಂತಹ ಸಾಕಷ್ಟು ಈವೆಂಟ್‌ಗಳಲ್ಲಿ ಭಾರತೀಯ ತಂಡವು ಮತ್ತಷ್ಟು ಪದಕಗಳನ್ನು ಆಶಿಸುತ್ತಿದೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 17 ವಿಭಾಗಗಳಲ್ಲಿ ಭಾಗವಹಿಸುವ 303 ಅಥ್ಲೀಟ್‌ಗಳ ತಂಡವನ್ನು ಭಾರತ ಕಳುಹಿಸಿದೆ.
ಇಂಡೋನೇಷ್ಯಾದಲ್ಲಿ ನಡೆದ 2018 ರ ಏಷ್ಯನ್ ಪ್ಯಾರಾ ಗೇಮ್ಸ್‌ನ ಈವೆಂಟ್‌ನಲ್ಲಿ ಭಾರತವು 15 ಚಿನ್ನ, 24 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು ಒಳಗೊಂಡು 72 ಪದಕಗಳ ಅತ್ಯುತ್ತಮ ಪ್ರದರ್ಶನವನ್ನು ನೀಡಿತ್ತು.