ಯಲ್ಲಾಪುರ: ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಮಾನ ಕೂಲಿ ಒದಗಿಸುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದು ತಾಲೂಕ ಪಂಚಾಯಿತಿಯ ತಾಂತ್ರಿಕ ಸಂಯೋಜಕ ನಾರಾಯಣ ತವನೋಜಿ ಹೇಳಿದರು.
ಅವರು ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಇಂಗುಗುಂಡಿ ಕಾಮಗಾರಿ ಸ್ಥಳದಲ್ಲಿ ‘ನರೇಗಾ ನಡಿಗೆ ಸುಸ್ಥಿರತೆಯೆಡೆಗೆ’ ಅಭಿಯಾನದಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಜನ ಕೈಗೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಮಾಹಿತಿ ನೀಡಿ. ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಿಗುವ ಕೂಲಿ ಮೊತ್ತ, ಇನ್ನಿತರ ಸೌಲಭ್ಯಗಳ ಕುರಿತು ತಿಳಿಸಿದರು.
ತಾಲೂಕ ಐಇಸಿ ಸಂಯೋಜಕ ವಿಶ್ವಾಸ ಅಂಗಡಿ ಮಾತನಾಡಿ, ಯಲ್ಲಾಪುರ ತಾಲೂಕು ಬರಪೀಡಿತ ತಾಲೂಕಾಗಿ ಘೋಷಣೆಯಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ಇನ್ನೂ 50 ದಿನಹೆಚ್ಚು ಕೂಲಿಸಿಗಲಿದೆ. ಇದರ ಸದುಪಯೋಗವನ್ನು ರೈತರುಪಡೆದುಕೊಳ್ಳಬೇಕೆಂದರು. ಈ ವೇಳೆಪಂಚಾಯಿತಿ ವ್ಯಾಪ್ತಿಯ ರೈತರ ಹಳೆಯ ಜಾಬ್‌ಕಾರ್ಡ್ಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಹಾಗೂ ಇನ್ನೂಳಿದ ರೈತರಿಗೆ ಹೊಸ ಜಾಬ್ ಕಾರ್ಡ್ ವಿತರಿಸುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಲಾಯಿತು.
ಕಾಮಗಾರಿ ಸ್ಥಳದಲ್ಲಿ ಕಿರವತ್ತಿಯ ಡಿ.ಆರ್.ಎಫ್.ಓ. ಮಂಜುನಾಥಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಯಲ್ಲಾಪುರ ತಾಲೂಕ ಪಂಚಾಯಿತಿಯ ತಾಂತ್ರಿಕ ಸಹಾಯಕ(ಅರಣ್ಯ) ಅಬ್ದುಲ್, ಕಿರವತ್ತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.