ಕಾರವಾರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇದ್ದ 105 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದ ಮಹಿಳೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ನೇಮಕಾತಿ ಆದೇಶ ಪಡೆದ ಒಬ್ಬರು ಗರ್ಭಿಣಿ ಕಾರ್ಯಕರ್ತೆಗೆ ಸರ್ಕಾರಿ ನೌಕರಿ ಆದೇಶದ ಜೊತೆಗೆ, ಸಾಂಪ್ರದಾಯಿಕವಾಗಿ ಸೀಮಂತ ಶಾಸ್ತ್ರ ಮಾಡುವ ಮೂಲಕ ಅವರಿಗೆ ಅವರ ಸಂತಸವನ್ನು ದುಪ್ಪಟ್ಟುಗೊಳಿಸಿದ್ದಾರೆ.
ಹೊಸದಾಗಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕಾತಿ ಆದೇಶ ಪಡೆದ ಗರ್ಭಿಣಿ ಮಹಿಳೆ ವನಿತಾ ಮಡಿವಾಳ ಅವರಿಗೆ ನೇಮಕಾತಿ ಆದೇಶ ನೀಡಿದ ಜಿಲ್ಲಾಧಿಕಾರಿಗಳು, ಅವರಿಗೆ ಸುಸೂತ್ರವಾಗಿ ಹೆರಿಗೆಯಾಗಿ ತಾಯಿ ಮತ್ತು ಮಗು ಆರೋಗ್ಯವಾಗಿ ಇರಲಿ ಎಂಬ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದಲೇ ಸೀಮಂತ ಕಾರ್ಯಕ್ರಮವನ್ನು ಸ್ವತಃ ತಾವೇ ಮುಂದೆ ನಿಂತು ನೆರವೇರಿಸಿದರು.
ಗರ್ಭಿಣಿ ಮಹಿಳೆಯರಿಗೆ ಅರಿಶಿನ ಕುಂಕುಮ ಹಚ್ಚಿ, ಹೂವು ಮೂಡಿಸಿ, ಹಸಿರು ಗಾಜಿನ ಬಳೆಗಳನ್ನು ತೊಡಿಸಿ, ಹೊಸ ಸೀರೆ ನೀಡಿ, ಆರತಿ ಬೆಳಗಿ, ಉಡಿ ತುಂಬಿಸಿದ ಜಿಲ್ಲಾಧಿಕಾರಿಗಳು , ಸಿಹಿ ತಿನ್ನಿಸಿ, ಸುಖ ಪ್ರಸವವಾಗಿ, ತಾಯಿ ಮಗು ಸದಾ ಆರೋಗ್ಯವಾಗಿರಲಿ ಎಂದು ಹಾರೈಸಿದರು.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಿ ನೌಕರಿಯ ನೇಮಕಾತಿ ಆದೇಶ ಪಡೆದು, ಕುಟುಂಬದ ಆರ್ಥಿಕ ಭದ್ರತೆಗೆ ಕಾರಣವಾದ ಸಂತೋಷದ ಜೊತೆಗೆ, ಜಿಲ್ಲೆಯ ಉನ್ನತ ಅಧಿಕಾರಿಗಳಿಂದ ಸೀಮಂತ ನೆರವೇರಿಸಿಕೊಂಡ ಹೆಮ್ಮೆಯಿಂದ ಗರ್ಭಿಣಿಯರ ಮುಖದಲ್ಲಿ ಕಾಣುತ್ತಿದ್ದ ಸಂತಸಕ್ಕೆ ಸಾಟಿ ಇರಲಿಲ್ಲ. ಇದೇ ಸಂದರ್ಭದಲ್ಲಿ ವಿವಿಧ ಅಂಗನವಾಡಿ ವ್ಯಾಪ್ತಿಯ ಸಂಗೀತಾ ಗೌಡ ಹಾಲಗದ್ದ, ಶ್ರೇಯಾ ನಾಯಕ್, ಕರುಣಿ ಹರಿಕಾಂತ್ ಎಂಬ ಮೂರು ಮಂದಿ ಮಹಿಳೆಯರಿಗೆ ಸಹ ಜಿಲ್ಲಾಧಿಕಾರಿ ಸೀಮಂತ ಕಾರ್ಯ ನೆರವೇರಿಸಿ, ಹಾರೈಸಿದರು.
ಇದರ ಜೊತೆಯಲ್ಲಿ ಶಿಶುಗಳಿಗೆ 6 ತಿಂಗಳ ನಂತರ ತಾಯಿಯ ಎದೆಹಾಲಿನ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಆರಂಭಿಸುವ ಕಾರ್ಯಕ್ರಮವಾದ ಶಿಶುಪ್ರಾಶನದಲ್ಲಿ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ತಿನ್ನಿಸಿದರು. ಜಿಲ್ಲಾಧಿಕಾರಿ ಅವರಿಂದ ಪೌಷ್ಟಿಕ ಆಹಾರ ಸ್ವೀಕರಿಸಿದ ಹಾಲುಗಲ್ಲದ ಕಂದಮ್ಮಗಳು ಆಹಾರವನ್ನು ಬಾಯಿ ಚಪ್ಪರಿಸಿ ಆನಂದಿಸಿದರು.