ಯಲ್ಲಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಲ್ಲಾಪುರ ತಾಲೂಕಿನಲ್ಲಿಯೂ ಕಾಂಗ್ರೆಸ್ ಪದಾಧಿಕಾರಿಗಳ ಹುದ್ದೆಗೆ ಪೈಪೋಟಿ ಶುರುವಾಗಿದೆ. ಇದರ ಪರಿಣಾಮ ಕಾಂಗ್ರೆಸ್ಸಿನಲ್ಲಿಯೂ ಇದೀಗ ಒಳ ರಾಜಕೀಯ ಜೋರಾಗಿ ನಡೆಯುತ್ತಿದೆ.
ತಾಲೂಕಿನ ಮಟ್ಟಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮಹತ್ವದ ಹುದ್ದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದಲೇ ಈ ಹುದ್ದೆ ನೇಮಕಾತಿ ನಡೆಯುವುದರಿಂದ ರಾಜಕೀಯ ಪ್ರಭಾವವೂ ಅಧಿಕ. ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ನಾರಾಯಣ ಭಟ್ಟ ಮೆಣಸುಪಾಲ್ ಅವರು ಇದೀಗ ಬ್ಲಾಕ್ ಕಾಂಗ್ರೆಸ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಕಳೆದ ಒಂದುವರೆ ವರ್ಷದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಈ ಅವಧಿಯಲ್ಲಿ ಮೂವರು ಅಧ್ಯಕ್ಷರ ಬದಲಾವಣೆಯಾಗಿದೆ. ಕಳೆದ ವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾರಾಯಣ ಭಟ್ಟ ಮೆಣಸುಪಾಲ್ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಡಿ ಎನ್ ಗಾಂವ್ಕರ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಆದರೆ, ವಿಧಾನಸಭಾ ಚುನಾವಣೆ ಹಿನ್ನಲೆ ಅವರನ್ನು ಏಕಾಏಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ವಿ ಎಸ್ ಪಾಟೀಲ್ ಅವರಿಗೆ ಬೆಂಬಲ ನೀಡದ ಆರೋಪದ ಅಡಿ ಅವರ ಹುದ್ದೆಯನ್ನು ಕಸಿದುಕೊಳ್ಳಲಾಗಿದ್ದು, ಒಂದು ಕಾಲದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರ ಆಪ್ತರಾಗಿ ನಂತರ ಅಲ್ಲಿಂದ ಹೊರಬಂದು ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದ ವಿ ಎಸ್ ಭಟ್ಟ ಅವರಿಗೆ ಬ್ಲಾಕ್ ಕಾಂಗ್ರೆಸ್ ಜವಾಬ್ದಾರಿ ನೀಡಲಾಗಿತ್ತು. ಕೆಲ ತಿಂಗಳ ನಂತರ ವಿ ಎಸ್ ಭಟ್ಟ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಮತ್ತೆ ಡಿ ಎನ್ ಗಾಂವ್ಕರ್ ಅವರನ್ನೇ ಆ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು. ಇದೀಗ ಈ ಇಬ್ಬರನ್ನು ಹೊರತುಪಡಿಸಿ ಮೂರನೇ ವ್ಯಕ್ತಿಯಾದ ನಾರಾಯಣ ಭಟ್ಟ ಮೆಣಸುಪಾಲ್ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಡಿ ಎನ್ ಗಾಂವ್ಕರ್ ಅವರು 17 ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ವಿ ಎಸ್ ಭಟ್ಟ ಅವರು ಒಂದುವರೆ ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ಸಿನ ಹೊಣೆ ಹೊತ್ತಿದವರಾಗಿದ್ದಾರೆ. ಇದೀಗ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾರಾಯಣ ಭಟ್ಟ ಮೆಣಸುಪಾಲ್ ಅವರು ಸಹ ಹಿಂದೊಮ್ಮೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದವರಾಗಿದ್ದಾರೆ. ಈ ಮೂವರು ಆ ಹುದ್ದೆಗೆ ಅರ್ಹರೇ ಆಗಿದ್ದರೂ, ಚುನಾವಣೆ ವೇಳೆ ವಿ ಎಸ್ ಪಾಟೀಲ್ ಅವರ ಜೊತೆಗೆ ಓಡಾಡಿಕೊಂಡಿದ್ದ ನಾರಾಯಣ ಭಟ್ಟರಿಗೆ ಈ ಹುದ್ದೆ ಒಲಿದಿದೆ.
ಒಟ್ಟಿನಲ್ಲಿ ಇದೀಗ ತಾಲೂಕಾ ಕಾಂಗ್ರೆಸ್ಸಿನಲ್ಲಿಯೂ ಮೇಲ್ನೋಟಕ್ಕೆ ಮೂರು ಬಣಗಳು ಕಂಡುಬಂದಿದ್ದು, ಶಿವರಾಮ ಹೆಬ್ಬಾರ್ ಏನಾದರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಲ್ಲಿ ಇನ್ನೊಂದು ಬಣ ಹುಟ್ಟುವುದರಲ್ಲಿ ಅನುಮಾನವಿಲ್ಲ!