ಅಂಕೋಲಾ: ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶನದಂತೆ 2024-25ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ತಯಾರಿಸುವ ನಿಟ್ಟಿನಲ್ಲಿ ಗುರುವಾರ ತಾಲೂಕಿನ ಹಾರವಾಡ ಗ್ರಾಮ ಪಂಚಾಯತ್‌ನಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿದರು.
ಇದೇ ವೇಳೆ ನರೇಗಾ ಕಾಮಗಾರಿಗಳ ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಗೌಡ ಹಾಗೂ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ನೀಡಿದರು. ತರಂಗಮೇಟ್ ಮಜರೆಯಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದಡಿ ಮನೆ ಮನೆ ಭೇಟಿ ನೀಡಿ ನರೇಗಾ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚಿ ಕಾಮಗಾರಿ ಬೇಡಿಕೆ ಪಡೆಯಲಾಯಿತು. ಉದ್ಯೋಗ ಚೀಟಿ ಪಡೆಯದಿರುವ ಕುಟುಂಬಗಳನ್ನು ಗುರುತಿಸಿ ಉದ್ಯೋಗ ಚೀಟಿ ವ್ಯವಸ್ಥೆ ಕಲ್ಪಿಸಲಾಯಿತು.
ತಾಲ್ಲೂಕು ಪಂಚಾಯತ್ ಯೋಜನಾಧಿಕಾರಿ ಹಾಗೂ ಗ್ರಾ.ಪಂ ನೋಡಲ್ ಅಧಿಕಾರಿ ನಾಗಭೂಷಣ ಕಲ್ಮನೆ, ಗ್ರಾ.ಪಂಚಾಯತಿ ಅಧ್ಯಕ್ಷೆ ಶೀಲಾ ಜೆ.ಹಾರವಾಡೇಕರ್, ಉಪಾಧ್ಯಕ್ಷ ಸಂತೋಷ್ ದುರ್ಗೇಕರ್, ಸದಸ್ಯರು, ಪಂಚಾಯತ್ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.