ಬೆಂಗಳೂರು: ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಿಗೆ ಹೋಗದೇ ಕೇವಲ ಆಧಾರ್ ಬಳಸಿಕೊಂಡು ಹಣ ಪಡೆಯಲು ದೇಶದಲ್ಲಿ ಎಇಪಿಎಸ್ (ಆಧಾರ್ ಆಧಾರಿತ ಹಣ ಪಾವತಿ ವ್ಯವಸ್ಥೆ) ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿರುವ ಸೈಬರ್ ವಂಚಕರು ಜನರ ಖಾತೆಗಳಲ್ಲಿರುವ ಹಣ ದೋಚುತ್ತಿದ್ದಾರೆ.
ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಹಲವು ಕಡೆಯ ಕೆಲಸಗಳಿಗಾಗಿ ಆಧಾರ್ ಬಯೋಮೆಟ್ರಿಕ್ (ಬೆರಳಚ್ಚು) ಮಾಹಿತಿ ಹಂಚಿಕೊಳ್ಳುತ್ತಿರುವ ಜನರ ಖಾತೆಯಲ್ಲಿರುವ ಹಣ ಇವರ ಅರಿವಿಗೆ ಬಾರದಂತೆ ಕಡಿತವಾಗುತ್ತಿದೆ. ಇದರಿಂದ ಆತಂಕಗೊಳ್ಳುತ್ತಿರುವ ಜನ, ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಜನರ ವೈಯಕ್ತಿಕ ಮಾಹಿತಿಯುಳ್ಳ ಆಧಾರ್ ಬಯೋಮೆಟ್ರಿಕ್ ಸೌಲಭ್ಯವನ್ನು ಬಳಸಿಕೊಂಡು ಸೈಬರ್ ವಂಚಕರು, ಜನರಿಗೆ ಅರಿವಿಲ್ಲದಂತೆ ಖಾತೆಯಲ್ಲಿರುವ ಹಣವನ್ನು ಕದಿಯುತ್ತಿದ್ದಾರೆ. ಇಂಥ ವಂಚನೆ ಜಾಲ, ರಾಜ್ಯದೆಲ್ಲೆಡೆ ವ್ಯಾಪಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.