Slide
Slide
Slide
previous arrow
next arrow

ವಿಷ್ಣು ಭಟ್ಟ ಯಕ್ಷರಂಗದ ಮೇರು ಕಲಾವಿದ ; ರಾಘವೇಶ್ವರ ಶ್ರೀ

300x250 AD

ಗೋಕರ್ಣ: ಯಕ್ಷರಂಗದ ಅಪೂರ್ವ ಕಲಾವಿದ, ಶ್ರೀಮಠದ ಜತೆ ನಿಕಟ ಸಂಪರ್ಕ ಹೊಂದಿದ ವಿಷ್ಣು ಭಟ್ಟ ಮೂರೂರು ನಿಧನಕ್ಕೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಮಹಾಸ್ವಾಮೀಜಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ರಂಗಭೂಮಿಯಲ್ಲಿ ತನ್ನ ಭಾವಪೂರ್ಣ ಅಭಿನಯ, ಪಾರಂಪರಿಕ ನೃತ್ಯ, ಜತೆಗೆ ಆಳವಾದ ಪೌರಾಣಿಕ ಜ್ಞಾನ- ಈ ಗುಣಗಳಿಂದ ಪೌರಾಣಿಕ ಪಾತ್ರಗಳಿಗೆ ವಿಶೇಷ ಮೆರುಗು ತಂದುಕೊಟ್ಟ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದರು. ಶ್ರೀಸಂಸ್ಥಾನದವರ ವಿಶೇಷ ಪ್ರೀತಿಗೆ ಭಾಜನರಾಗಿದ್ದ ಅವರು ಶ್ರೀಮಠದ ರಾಮಕಥೆಯ ರೂಪಕಗಳಲ್ಲಿ ಪ್ರಮುಖ ಕಲಾವಿದರಾಗಿ ಭಾಗವಹಿಸಿ ಅಪಾರ ಜನಮನ್ನಣೆ ಗಳಿಸಿದ್ದರು ಎಂದು ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.

ಸುಮಾರು ನಲುವತ್ತೈದು ವರ್ಷಗಳ ಕಾಲ ಯಕ್ಷರಂಗದಲ್ಲಿ ವೈವಿಧ್ಯಮಯ ಪಾತ್ರಗಳ ನಿರ್ವಹಣೆ ಹಾಗೂ ಸಮಯೋಚಿತ ಮಾತುಗಾರಿಕೆಯಿಂದ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದವರು. ಧಾರ್ಮಿಕರಾಗಿ ಶ್ರೀಮಠದ ಶ್ರೀ ಪರಿವಾರದಲ್ಲಿ ಕಾರ್ಯ ನಿರ್ವಹಿಸಿದ ಧನ್ಯತೆ ಅವರದ್ದು. ಬಹುಕಾಲ ಬಾನ್ಕುಳಿ ಶ್ರೀ ರಾಮದೇವ ಮಠದಲ್ಲಿನ ಗೋಸ್ವರ್ಗದಲ್ಲಿ ಗೋಸೇವೆ ಮಾಡುತ್ತ ಸಮಾಜಸೇವೆಯಲ್ಲೂ ತೊಡಗಿಕೊಂಡವರು.

300x250 AD

ಅವರಿಗೆ ಸಮಾಜದ ಹಲವು ಗೌರವಗಳು ಸಂದಿರುವುದರ ಜತೆಯಲ್ಲಿ ಶ್ರೀಪರಿವಾರದ ಸನ್ಮಾನವೂ ದೊರೆತಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಾ ಅವರಿಗೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಭಾವಪುಷ್ಟಿಯನ್ನು, ರಸನಿಷ್ಠತೆಯನ್ನು ಕಾಪಾಡಿಕೊಂಡ ಯಕ್ಷಗಾನ ಪರಂಪರೆಯ ಬಹುಮುಖ್ಯ ಕೊಂಡಿಯೊಂದು ಕಳಚಿದಂತಾಗಿದೆ. ಹಲವರ ಪ್ರಭಾವಕ್ಕೆ ಒಳಗಾಗಿಯೂ ತನ್ನತನವನ್ನು ಕಾಪಾಡಿಕೊಂಡ ನೈಜ ಕಲಾವಿದ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಕಂಬನಿ ಮಿಡಿದಿದ್ದಾರೆ.

Share This
300x250 AD
300x250 AD
300x250 AD
Back to top