ಕುಮಟಾ: ನಿವೃತ್ತ ಶಿಕ್ಷಕರೋರ್ವರಿಗೆ ಶಿಕ್ಷಣಾಧಿಕಾರಿಗಳ ಜೊತೆ ನಗಾರಿ, ಪಂಚವಾದ್ಯದೊಂದಿಗೆ ಸಿಡಿಮದ್ದುಗಳನ್ನು ಸಿಡಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ವೇದಿಕೆಯ ಮೇಲೆ ಕರೆತಂದು ಸನ್ಮಾನಿಸಿ ಬೀಳ್ಕೊಟ್ಟ ಅಪರೂಪದ ಕಾರ್ಯಕ್ರಮ ಮಿರ್ಜಾನಿನ ರಾಮಕ್ಷತ್ರೀಯ ಸಭಾಭವನದಲ್ಲಿ ಜರುಗಿತು.
ಮಿರ್ಜಾನ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತರು ಆದ ನಿವೃತ್ತ ಶಿಕ್ಷಕ ದತ್ತಾತ್ರೇಯ ಪಂಡಿತ ಅವರಿಗೆ ದೊರೆತ ಅದ್ದೂರಿ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಧಾರೆಯೆರೆದು ತನ್ಮೂಲಕ ನಿರರ್ಗಳವಾಗಿ ಇಂಗ್ಲಿಷ್ನಲ್ಲಿ ಮಾತನಾಡುವ ಕಲೆಯನ್ನು ಕರಗತಗೊಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿಸುವಲ್ಲಿ ಮಹತ್ತರವಾದ ಸಾಧನೆ ಗೈದ ಶಿಕ್ಷಕ ದತ್ತಾತ್ರೇಯ ಪಂಡಿತ ಅವರನ್ನು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಪಾಲಕರು, ಸ್ನೇಹಿತರು, ಶಾಲಾಭಿವೃದ್ಧಿ ಸಮಿತಿಯವರು ನೂರಾರು ಮಂದಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಡಯಟ್ ಪ್ರಾಂಶುಪಾಲ ಎನ್.ಜಿ.ನಾಯ್ಕ, ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕ ವಿ.ಪಿ.ಶಾನಭಾಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಆನಂದು ಗಾಂವಕಾರ, ಗ್ರಾ.ಪಂ.ಅಧ್ಯಕ್ಷೆ ಜೋಸ್ಟೀನ ಡಿಸೋಜಾ, ಸಮನ್ವಯಾಧಿಕಾರಿ ರೇಖಾ, ಸಿ.ಆರ್.ಪಿ. ಭಾರತಿ ಆಚಾರಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಧ್ಯಾಪಕ ಅರ್ಜುನ್ ಮೊಕಾಶಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ನಾಯ್ಕ, ನಿವೃತ್ತ ಮುಖ್ಯ ಧ್ಯಾಪಕ ನಾರಾಯಣ ಗಾವಡಿ ಅವರು ಪಂಡಿತರು ಅಪರೂಪದ ಶಿಕ್ಷಕರು ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಅವರು ಪಂಡಿತರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ಕೊನೆಯಲ್ಲಿ ತಮ್ಮ ಸರಕಾರಿ ವಾಹನದಲ್ಲಿ ಪಂಡಿತ ಮಾಸ್ತರರನ್ನು ಅವರ ಮನೆ ಭಾಗಿಲವರೆಗೂ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು. ಶೈಲೇಶ ನಾಯ್ಕ ಸ್ವಾಗತಿಸಿ, ವಂದಿಸಿದರು.