ದಾಂಡೇಲಿ: ವಿಶ್ವ ಹಿಂದು ಪರಿಷತ್, ಭಜರಂಗದಳ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆಯು ಜೊಯಿಡಾ ತಾಲ್ಲೂಕಿನ ಜನತಾ ಕಾಲೋನಿಯಿಂದ ಶನಿವಾರ ಆರಂಭಗೊಂಡು ದಾಂಡೇಲಿ ನಗರದ ಹಳೆದಾಂಡೇಲಿಗೆ ಬಂದು ತಲುಪಿತು.
ಹಳೆ ದಾಂಡೇಲಿಯ ಗಾಂಧಿ ಚೌಕ್‌ನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, ಶೌರ್ಯ ಜಾಗರಣ ರಥಯಾತ್ರೆಗೆ ನಗರದಲ್ಲಿ ಚಾಲನೆಯನ್ನು ನೀಡಲಾಯಿತು. ಹಳೆದಾಂಡೇಲಿಯಿಂದ ಆರಂಭಗೊಂಡ ಶೌರ್ಯ ಜಾಗರಣ ರಥಯಾತ್ರೆಯೂ ನಗರದ ಪಟೇಲ್ ವೃತ್ತದ ಸಮೀಪ ಬಂದು, ಅಲ್ಲಿ ಶ್ರೀಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ರಥಯಾತ್ರೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅಲ್ಲಿಂದ ಬಸ್ ನಿಲ್ದಾಣ, ಮಾರುತಿ ದೇವಸ್ಥಾನ, ಸೋಮಾನಿ ವೃತ್ತ ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶೌರ್ಯ ಜಾಗರಣ ರಥಯಾತ್ರೆಯು ಸಂಚರಿಸಿತು.
ಈ ಸಂದರ್ಭದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು, ಮುಖಂಡರಾದ ರೋಶನ್ ನೇತ್ರಾವಳಿ, ಭಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿ ಮೊದಲಾದವರು ಮಾತನಾಡಿ, ಶೌರ್ಯ ಜಾಗರಣಾ ರಥಯಾತ್ರೆಯ ಮುಖ್ಯ ಉದ್ದೇಶ ಹಿಂದೂ ಧರ್ಮೀಯರನ್ನು ಸಂಘಟಿಸಿ, ಹಿಂದೂ ಧರ್ಮ ಜಾಗೃತಿಯನ್ನು ಮೂಡಿಸುವುದಾಗಿದೆ. ಅನ್ಯಧರ್ಮಿಯರಿಂದಾಗುತ್ತಿರುವ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಬೇಕಿದೆ ಎಂದರು. ನಮ್ಮ ಹಿಂದೂ ಧರ್ಮದ ಸನಾತನ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ನಮ್ಮ ಧರ್ಮದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಂಜಲ ಗುಣ ಮನಸ್ಸಿನಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಭಾರತಿ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಆರ್.ಎಸ್.ಎಸ್ ಪ್ರಮುಖರಾದ ದಯಾನಂದ ಮರಾಠೆ, ಪ್ರಮುಖರಾದ ಸುಧಾಕರ ರೆಡ್ಡಿ, ರವಿ ಕಾಮತ್, ರಾಜಶೇಖರ್ ಪಾಟೀಲ್, ಗೋಪಾಲ್ ಜಾಧವ್, ಬುದ್ಧಿವಂತ ಗೌಡ ಪಾಟೀಲ್, ವಿಜಯ್ ಕೋಲೇಕರ್, ಸಂಜೀವ್ ಜಾಧವ್, ಚೆನ್ನಬಸಪ್ಪ ಮುರುಗೋಡ, ಪ್ರಶಾಂತ ಬಸೂರ್ತೆಕರ, ಸುರೇಶ್ ಕಾಮತ್, ಲಿಂಗಯ್ಯ ಪೂಜಾರ್,ಶಿಬವಸಪ್ಪ ನರೇಗಲ್, ನಾಗರಾಜ ಅನಂತಪುರ, ಲಿಂಗಯ್ಯ ಪೂಜಾರ್, ಭೀಮುಶಿ ಬಾದುಲಿ, ಸೇರಿದಂತೆ ಹಿಂದೂ ಪರ ಸಂಘಟನೆಯ ಮುಖಂಡರು ಕಾರ್ಯಕರ್ತರು, ಹಿಂದೂ ಧರ್ಮ ಬಾಂಧವರು ಉಪಸ್ಥಿತರಿದ್ದರು.