ಶಿರಸಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಣಕ್ಕೆ ಇಳಿಸುವ ಬಗ್ಗೆ ಪಕ್ಷದ ವಲಯದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆ ನಡೆದಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಗ 2024ರ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯಲಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಯಾರಿಯನ್ನು ಪ್ರಾರಂಭಿಸಿದೆ. ಈಗಾಗಲೇ ಬಿಜೆಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು ತಯಾರಿಗೆ ಇಳಿದಿದೆ. ಇನ್ನು ಕಾಂಗ್ರೆಸ್ ಸಚಿವರುಗಳನ್ನು ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರನ್ನಾಗಿ ನೇಮಿಸುವ ಮೂಲಕ ಚುನಾವಣೆಯ ತಯಾರಿಯನ್ನು ಪ್ರಾರಂಭಿಸಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಚಿವ ಹೆಚ್ ಕೆ ಪಾಟೀಲ್ ವೀಕ್ಷಕರನ್ನಾಗಿ ನೇಮಿಸಿದ್ದು ಈಗಾಗಲೇ ಕೆಪಿಸಿಸಿಯ ನಾಯಕರು ಎಲ್ಲಾ ಕ್ಷೇತ್ರಗಳಲ್ಲಿ ಯಾರ್ಯಾರನ್ನ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕು ಎನ್ನುವ ಕುರಿತು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಜಿಲ್ಲೆಯಿಂದ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕೆ ಇಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಜಿಲ್ಲೆಯಿಂದ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕೆ ಇಳಿಯಲು ಹಲವರು ಸಿದ್ಧತೆ ನಡೆಸಿದ್ದಾರೆ. ಆದರೆ ಆಡಳಿತರೂಢ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿ ಹೇಗಾದರೂ ಮಾಡಿ ಗೆಲ್ಲಿಸಿಕೊಂಡು ಬರಲೇ ಬೇಕು ಎನ್ನುವ ತಯಾರಿಯಲ್ಲಿದೆ. ಈ ನಿಟ್ಟಿನಲ್ಲಿ ಅಂಜಲಿ ನಿಂಬಾಳ್ಕರ್ ಅವರ ಹೆಸರು ಮುಂಚೂಣಿಗೆ ಬಂದಿದೆ ಎನ್ನಲಾಗಿದೆ.
ಈ ಬಾರಿ ಅನಂತಕುಮಾರ ಹೆಗಡೆ ಕಣಕ್ಕೆ ಇಳಿಯುವುದು ಅನುಮಾನ ಎನ್ನಲಾಗಿದ್ದು ಕಾಂಗ್ರೆಸ್ನಿಂದ ಪ್ರಭಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಗೆಲುವು ಸುಲಭವಾಗುತ್ತದೆ ಎನ್ನುವುದು ಪಕ್ಷದ ನಾಯಕರ ಲೆಕ್ಕಾಚಾರ. ಅಂಜಲಿ ನಿಂಬಾಳ್ಕರ್ ವೃತ್ತಿಯಲ್ಲಿ ವೈದ್ಯರಾಗಿದ್ದು ಶಾಸಕರಾದ ಅನುಭವವನ್ನು ಸಹ ಹೊಂದಿದವರಾಗಿದ್ದಾರೆ. ಅಲ್ಲದೇ ಮಹಿಳಾ ಅಭ್ಯರ್ಥಿ ಜೊತೆಗೆ ಶಿಕ್ಷಿತರಾಗಿರುವ ಹಿನ್ನಲೆಯಲ್ಲಿ ಅವರನ್ನು ಕಣಕ್ಕೆ ಇಳಿಸಿದರೆ ಜನರು ಒಪ್ಪುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೆದಿದೆ. ಜಿಲ್ಲೆಯಿಂದ ಯಾರೇ ನಾಯಕರಿಗೆ ಟಿಕೆಟ್ ನೀಡಿದರು ಮುಸುಕಿನ ಗುದ್ದಾಟ ಆಗುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರುವ ಖಾನಾಪುರದ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೇಟ್ ನೀಡಿದರೆ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ.
ಅಲ್ಲದೇ ಸರ್ಕಾರದ ಗ್ಯಾರಂಟಿಗಳು ಅತಿ ಹೆಚ್ಚಾಗಿ ಮಹಿಳೆಯರಿಗೆ ಉಪಯೋಗವಾಗುತ್ತಿದ್ದು ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸಬಹುದು ಎನ್ನುವ ಲೆಕ್ಕಾಚಾರ ನಡೆದಿದೆ. ಚುನಾವಣೆಯ ವೀಕ್ಷಕರಾಗಿರು ಹೆಚ್ ಕೆ ಪಾಟೀಲ್ ಜಿಲ್ಲೆಯಲ್ಲಿ ಸಂಚರಿಸಿ ಮಹಿಳಾ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ ಎನ್ನಲಾಗಿದ್ದು ಸಚಿವರು ನೀಡುವ ವರದಿಯ ಆಧಾರದ ಮೇಲೆ ಟಿಕೆಟ್ ಯಾರಿಗೆ ಕೊಡಲಿದ್ದಾರೆ ಎನ್ನುವುದು ಅಂತಿಮವಾಗಿ ನಿರ್ಧಾರವಾಗಲಿದೆ.
ಹಿಂದುಳಿದ ವರ್ಗದ ಮತದ ಮೇಲೆ ಕಣ್ಣು:
ಕಾಂಗ್ರೆಸ್ ಈ ಬಾರಿ ಹಿಂದುಳಿದ ವರ್ಗಗಳ ಮತದ ಮೇಲೆ ಕಣ್ಣು ಇಟ್ಟು ಅಭ್ಯರ್ಥಿ ಆಯ್ಕೆಗೆ ಮುಂದಾಗಲಿದೆ ಎನ್ನಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 16 ಲಕ್ಷ ಮತದಾರರು ಇದ್ದು ಅದರಲ್ಲಿ ಸುಮಾರು 14 ಲಕ್ಷ ಮತದಾರರು ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ ಮತಗಳೇ ಎನ್ನಲಾಗಿದೆ.
ಅಂಜಲಿ ನಿಂಬಾಳ್ಕರ್ ಮರಾಠಾ ಸಮುದಾಯಕ್ಕೆ ಸೇರಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಮರಾಠಾ ಮತಗಳು, ಜೊತೆಗೆ ಹಿಂದುಳಿದ ವರ್ಗಗಳಾದ ನಾಮಧಾರಿ, ಒಕ್ಕಲಿಗ, ಸಣ್ಣ ಸಣ್ಣ ಸಮುದಾಯದ ಮತಗಳು, ಅಲ್ಲದೇ ಸುಮಾರು 2 ಲಕ್ಷದಷ್ಟಿರುವ ದಲಿತ ಮತಗಳ ಜೊತೆಗೆ 2 ಲಕ್ಷಕ್ಕೂ ಅಧಿಕ ಇರುವ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪರ ಬಿದ್ದರೇ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಮುನ್ನವೇ ಜಾತಿ ಗಣತಿಯ ವರದಿಯನ್ನ ಪ್ರಕಟಿಸುವ ಮೂಲಕ ಚುನಾವಣೆ ಎದುರಿಸಿ ಹಿಂದುಳಿದ ಮತಗಳನ್ನ ತನ್ನತ್ತ ಸೆಳೆದು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ ಎನ್ನುವುದು ಪಕ್ಷದ ಮೂಲಗಳ ಅಭಿಪ್ರಾಯ.