ಶಿರಸಿ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ವಿರೋಧಿಸಿ ಜಿಲ್ಲೆಯ ಒಂದು ಲಕ್ಷ ಕುಟುಂಬದಿಂದ ಆಕ್ಷೇಪಣೆ ಪತ್ರ ಸಲ್ಲಿಸುವ ಕಸ್ತೂರಿ ರಂಗನ್ ವಿರೋಧ ಜಾಥಾವನ್ನು ಉತ್ತರ ಕನ್ನಡ ಜಿಲ್ಲಾದ್ಯಂತ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ತೀರಸ್ಕರಿಸಲು ಕೇಂದ್ರ ಸರಕಾರಕ್ಕೆ ಒತ್ತಡ ತರಲು ಈ ಜಾಥಾ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಗರದಲ್ಲಿ ಆ.6ರ ಶುಕ್ರವಾರ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಿದ ಸೂಕ್ಷ್ಮ ಪ್ರದೇಶದವನ್ನು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಪ್ರದರ್ಶಿಸಿ ಜಾಥಾ ಮಾಹಿತಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಸ್ತೂರಿ ರಂಗನ್ ವಿರೋಧ ಜಾಥವು ಜಿಲ್ಲೆಯ 9 ತಾಲೂಕಿನ 147 ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ, 704 ಹಳ್ಳಿಗಳಲ್ಲಿ, 30 ದಿನ ಅವಧಿಯಲ್ಲಿ ಜಿಲ್ಲಾದ್ಯಂತ ಸಂಚರಿಸಿ, ಘೋಷಿಸಲ್ಪಟ್ಟ ಪ್ರದೇಶದ ಮನೆ-ಮನೆಗೆ ಸಂಪರ್ಕಿಸಿ, ಕಸ್ತೂರಿ ರಂಗನ್ ಜ್ಯಾರಿಯಿಂದ ಉಂಟಾಗುವ ಅನಾನುಕೂಲವನ್ನು ಕರಪತ್ರದ ಮೂಲಕ ವಿವರಿಸಿ ಪ್ರತಿ ಕುಟುಂಬದ ಯಜಮಾನರಿಂದ ಆಕ್ಷೇಪಣೆ ಪತ್ರಕ್ಕೆ ಸಹಿ ಪಡೆಯಲಾಗುತ್ತದೆ ಎಂದೂ ತಿಳಿಸಿದರು.
ಕಸ್ತೂರಿರಂಗನ್ ಪ್ರದೇಶದಲ್ಲಿ ಗುರುತಿಸಲಾದ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಭಂದಿಸಿದ ಕೈಗಾರಿಕೆಗಳಿಗೆ ಕಡಿವಾಣ, ಆಧುನಿಕ ಪ್ರವಾಸೋಧ್ಯಮಕ್ಕೆ ಮಾರಕ, ಟೌನ್‌ಶಿಫ್ ಮತ್ತು ಬಹುಮಡಿಗೆ ಕಟ್ಟಡಗಳಿಗೆ ರಸ್ತೆ ನಿರ್ಮಾಣ, ವಿದ್ಯುತ್ ಸಂಪರ್ಕ, ಬೊರವೆಲ್, ಮರಳುಗಾರಿಕೆ, ಥರ್ಮಲ್ ಪವರ್ ಪ್ಲಾಂಟ್, ರೆಡ್ ಕ್ಯಾಟಗರಿ ಕೈಗಾರಿಕೆ, ಗಣಿಗಾರಿಕೆ, ವಾಣಿಜ್ಯೀಕರಣ, ಹೊಸ ವೈದಕೀಯ ಕಟ್ಟಡ ಕಾಮಗಾರಿ ಹಾಗೂ ಎಲ್ಲಾ ರೀತಿಯ ಗಣಿಗಾರಿಕೆ, ಹೊಸ ಜಲವಿದ್ಯುತ್ ಯೋಜನೆ ನಿಯಂತ್ರಣ ಮುಂತಾದ ಚಟುವಟಿಕೆಗೆ ನಿರ್ಭಂದಿಸುವಿಕೆ ಆಗಲಿದೆ ಎಂದೂ ಆತಂಕಿಸಿದರು.
ಅರ್ಜಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಅನಧೀಕೃತ ಒತ್ತುದಾರರೆಂದು ಘೋಷಿಸಿ ಒಕ್ಕಲೆಬ್ಬಿಸಲಾಗುವುದು, ಕೃಷಿ ಚಟುವಟಿಕೆಗೆ ರಾಸಾಯನಿಕ ಸಿಂಪಡನೆ ನಿರ್ಭಂದ ಹಾಗೂ ರೆಸಾರ್ಟ, ಏರ್‌ಪೋರ್ಟಗಳ ನಿರ್ಮಾಣ ನಿಯಂತ್ರಣ, ಕಂದಾಯ ಮತ್ತು ಅರಣ್ಯ ಪ್ರದೇಶಗಳ ಸಾಗುವಳಿದಾರರೂ ನಿರ್ಭಂಧಕ್ಕೆ ಒಳಪಡುವರು ಎಂದೂ ವಿಶ್ಲಷಣೆ ಮಾಡಿದರು.
ಶೇ. 65.09 ರಷ್ಟು ಪರಿಸರ ಸೂಕ್ಷ್ಮ ಪ್ರದೇಶ!:
ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ, ಜಿಲ್ಲೆಯ ಒಟ್ಟು ಕ್ಚೇತ್ರ 10,571 ಚ.ಕೀ.ಮೀ ಗಳಲ್ಲಿ, 6,998 ಚ.ಕೀ.ಮೀ ಕ್ಷೇತ್ರವನ್ನು ಪರಿಸರ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.ವರದಿಯ ಅಂಕೆ-ಸಂಖ್ಯೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಭೌಗೋಳಿಕ ಕ್ಷೇತ್ರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಶೇ. 65.09 ರಷ್ಟು ಆಗುವುದೆಂದು ಅಂದಾಜಿಸಲಾಗಿದೆ ಎಂದು ರವೀಂದ್ರ ನಾಯ್ಕ ಇನ್ನೊಂದು ಮಾಹಿತಿ ಮುಂದಿಟ್ಟರು.
ಪ್ರಮುಖರಾದ ಜಿಲ್ಲಾ ಪ್ರಧಾನ ಸಂಚಾಲಕ ಜಿ.ಎಂ.ಶೆಟ್ಟಿ ಅಂಕೋಲಾ, ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ನೆಹರು ನಾಯುಕ ಬೀಳೂರು, ತಾಲೂಕು ಅಧ್ಯಕ್ಷ ಲಕ್ಷ್ಮಣ ಮಾಳಕ್ಕನವರ ಇತರರು ಇದ್ದರು.
ಉತ್ತರ ಕನ್ನಡದ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಸೇರಿದ ಹಳ್ಳಿಗಳ ವಿವರಗಳನ್ನು ನೋಡಿದರೆ ಆತಂಕವಾಗುತ್ತದೆ. ಯಲ್ಲಾಪುರ ಅತಿ ಹೆಚ್ಚು, ಭಟ್ಕಳ ಅತಿ ಕಡಿಮೆ ಆಗಿದೆ. ಅಂಕೋಲಾ 43, ಭಟ್ಕಳ 28, ಹೊನ್ನಾವರ 44, ಜೋಯಿಡಾ 96, ಕಾರವಾರ 36, ಕುಮಟಾ 42, ಸಿದ್ದಾಪುರ 103, ಶಿರಸಿ 125, ಯಲ್ಲಾಪುರ 187 ಸೇರಿ ಒಟ್ಟೂ 704 ಹಳ್ಳಿಗಳು ಗುರುತಾಗಿವೆ. ಸಾಂಘಿಕ ಹೋರಾಟದಿಂದ ಮಾತ್ರ ತ್ಯಾಗದ ಜಿಲ್ಲೆಯ ಜನರ ರಕ್ಷಣೆ ಸಾಧ್ಯ
- ಏ. ರವೀಂದ್ರ ನಾಯ್ಕ, ಹೋರಾಟಗಾರ