ಯಲ್ಲಾಪುರ: ತಾಲೂಕಿನ ಚಿಪಗೇರಿ ಗ್ರಾಮದ ಮಹಿಳೆ ಪ್ರೀತಿ ಸಿದ್ದಿ ಮತ್ತು ಮಹಾಬಲೇಶ್ವರ ಸಿದ್ದಿ ಮೇಲೆ ಮೂರು ಬಾರಿ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಪೊಲೀಸರು ಬಂಧಿಸದೆ ಇರುವದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುರುವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದೆ.
ಯಲ್ಲಾಪುರ ತಾಲೂಕಿನ ಚಿಪಗೇರಿ ಉಮ್ಮಚಗಿ ಗ್ರಾಮದ ಪ್ರೀತಿ ಸಿದ್ದಿ ಮತ್ತು ಮಹಾಬಲೇಶ್ವರ ಸಿದ್ದಿ ಮೇಲೆ ಹಲ್ಲೆ ಮಾಡಿದ 6 ಜನರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳು ತಲೆಮರಿಸಿಕೊಂಡು ಹೋಗಲು ಅವಕಾಶ ಕೊಡುತ್ತಿರುವುದರಿಂದ, ಅನೇಕ ಜನರು ಹಲ್ಲೆ, ಹೊಡೆದಾಟ, ಬಡೆದಾಟ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿ ನೋವು ಗಾಯದಂತಹ ದೈಹಿಕ ಮಾನಸಿಕ ಹಾನಿಗೆ ಒಳಗಾಗುತ್ತಿದ್ದಾರೆ. ಹಲ್ಲೇಗೊಳಗಾದವರು ದೂರು ನೀಡಿ ನ್ಯಾಯಕ್ಕಾಗಿ ಕೇಳಿಕೊಂಡಾಗಲೂ, ಹಲ್ಲೆ ಮಾಡಿದವರಿಂದಲೇ ಪ್ರತಿ ದೂರು ಪಡೆಯಲಾಗುತ್ತಿದೆ. ಇದರಿಂದಾಗಿ ನೊಂದಿತರು ಭಯ, ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಘಟನೆಯಿಂದಾಗಿ ಅನ್ಯಾಯಕ್ಕೆ ಬಳಗಾದವರಿಗೆ ನ್ಯಾಯ ಪಡೆಯದಂತಾಗಿದೆ ಎಂದು ಮನವಿಯಲ್ಲಿ ಆಪಾದಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ಫಕೀರಪ್ಪ, ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋಪಾಲ್ ನಡಕಿಮನೆ, ಯಲ್ಲಾಪುರ ತಾಲೂಕ ಅಧ್ಯಕ್ಷ ಕಲ್ಲಪ್ಪ ಮಲ್ಲಪ್ಪ ಹೋಳಿ, ಮುಂಡಗೋಡ ತಾಲೂಕ ಅಧ್ಯಕ್ಷ ಜೂಜೆ ಸಿದ್ದಿ, ಪ್ರಮುಖರಾದ ಸಂತೋಷ ಕಟ್ಟಿಮನಿ, ಹನುಮಂತ ಹರಿಜನ, ಮಂಜುನಾಥ ಹರಿಜನ, ಪ್ರೀತಿ ಮಹಾಬಲೇಶ್ವರ ಸಿದ್ದಿ ಮುಂತಾದವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ತಹಶೀಲ್ದಾರ ಎಂ.ಗುರುರಾಜ್ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು.