ಸಿದ್ದಾಪುರ: ಎಲೆ ಚುಕ್ಕಿರೋಗ ಮತ್ತು ಬಯಲುಸೀಮೆಗಳಲ್ಲಿ ವಿಸ್ತರಣೆಗೊಳ್ಳುತ್ತಿರುವ ಅಡಿಕೆ ಬೆಳೆಯುವ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮಲೆನಾಡಿನ ರೈತರು ಪರ್ಯಾಯ ಬೆಳೆಗಳತ್ತ ಗಮನಹರಿಸುವುದು ಸೂಕ್ತ ಎಂದು ಭಾಗ್ಯವಿಧಾತ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಹೆಗಡೆ ನೇರ್ಗಾಲ್ ಹೇಳಿದರು.
ತಾಲ್ಲೂಕಿನ ಬಿಳಗಿಯಲ್ಲಿ ನಡೆದ ಭಾಗ್ಯವಿಧಾತ ರೈತ ಉತ್ಪಾದಕ ಸಂಸ್ಥೆಯ ನಾಲ್ಕನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಂಸ್ಥೆಯ ಮೂಲಕ ರೈತರೊಂದಿಗಿನ ಒಡನಾಟ ಸಂತಸ ತಂದಿದೆ. ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸುವುದರೊಂದಿಗೆ ರೈತರಿಗೆ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸಲು ಸಂಸ್ಥೆ ಬದ್ಧವಾಗಿದ್ದು ಸದಸ್ಯರು ಇದಕ್ಕೆ ಸಹಕರಿಸಬೇಕು ಎಂದರು.
ಅಥಿಗಳಾಗಿ ಭಾಗಿಯಾದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಕುಮಾರ ಎಲೆಚುಕ್ಕಿ ರೋಗದ ಲಕ್ಷಣಗಳು ಮತ್ತು ನಿರ್ವಹಣಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ರಾಮಚಂದ್ರ ನಾಯಕ್ ಮತ್ತು ನಿರ್ದೇಶಕ ಪರಮೇಶ್ವರ ಭಟ್ಟ ಮುತ್ತಿಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಮತ್ತು ಸೇವೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆಡಳಿತ ಮಂಡಳಿಗೆ ನೂತನವಾಗಿ ಮೂರು ನಿರ್ದೇಶಕರುಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ ಕುಂಬಾರಕುಳಿ ಕಾರ್ಯಕ್ರಮ ನಿರ್ವಹಿಸಿ ವಾರ್ಷಿಕ ವರದಿ ಮಂಡಿಸಿದರು.