Slide
Slide
Slide
previous arrow
next arrow

ಭತ್ತದ ಬೆಳೆಗೆ ರೋಗ ಕಾಟ : ಅನ್ನದಾತನಿಗೆ ಸಿಗದ ಸೂಕ್ತ ಪರಿಹಾರ

300x250 AD


ಶಿರಸಿ: ಮುಂಗಾರು ಮಳೆ ರಾಜ್ಯದ ಜನರಿಗೆ ಕೈ ಕೊಟ್ಟಿದ್ದರೂ ವಾಯುಭಾರ ಕುಸಿತದಿಂದ ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಂತೂ ತಕ್ಕಮಟ್ಟಿಗೆ ಮಳೆಯಾಗುತ್ತಿದೆ.‌ ಈ ಹಿಂದೆ‌ ಮಳೆಯಾಗದ ಕಾರಣ ಹಲವೆಡೆ ಭೂಮಿ ಹಾಗೂ ಬೆಳೆಗಳು ಒಣಗಿ ಹೋಗಿದ್ದು, ಇನ್ನು ಕೆಲವೆಡೆಯಂತೂ ಸಾವಿರಾರು ಎಕರೆ ಪ್ರದೇಶಕ್ಕೆ ಬೆಂಕಿ ಗಾಳಿ ರೋಗ ಕಾಣಿಸಿಕೊಂಡಿತ್ತು. ಇದೀಗ ಮಳೆ‌ ಕಾಣಿಸಿಕೊಂಡರೂ ಒಣಗಿದ ಹಾಗೂ ರೋಗಗ್ರಸ್ಥ ಬೆಳೆಗಳು ಕೊಳೆತು ಹಾಳಾಗುವ ಸ್ಥಿತಿ ಎದುರಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಕೃಷಿಯನ್ನು ನಂಬಿಕೊಂಡಿದ್ದ ರೈತರಿಗೆ ಈ ಬಾರಿ ವರುಣ ಏಟಿನ ಮೇಲೆ ಏಟು ನೀಡುತ್ತಿದ್ದಾನೆ. ಜೂನ್ ಬಳಿಕ ಉತ್ತಮ ಮಳೆಯಾಗಿದ್ದನ್ನು ನಂಬಿ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೊಯಿಡಾ, ಹಳಿಯಾಳ ಭಾಗದಲ್ಲಿ ರೈತರು 40,000 ಹೆಕ್ಟೇರ್ ಗೂ ಹೆಚ್ಚು ಭತ್ತ,‌ ಮೆಕ್ಕೆಜೋಳ, ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಸಿದ್ದರು. ಆದರೆ, ಆಗಸ್ಟ್‌ನಿಂದ ಸೆಪ್ಟೆಂಬರ್ ಮೊದಲ ವಾರದವರೆಗೂ ಮಳೆಯ ಕೊರತೆಯಿಂದ ಬಿತ್ತಿದ ಬೀಜಗಳು ಚಿಗುರೊಡೆದರೂ ಫಸಲು ನೀಡುವ ಮೊದಲೇ ಬಿಸಿಲಿನ ಹೊಡತಕ್ಕೆ ಸತ್ವ ಕಳೆದುಕೊಂಡು ಬಾಡುವ ಸ್ಥಿತಿಗೆ ಬಂದಿತ್ತು. ಇದರ ಜೊತೆ ಜಿಲ್ಲೆಯ ಅಂಕೋಲಾದಲ್ಲಂತೂ ಬೆಂಕಿಗಾಳಿ ರೋಗದಿಂದಾಗಿ ರೈತರ ಸಾವಿರಾರು ಎಕರೆ ಭತ್ತದ ಕೃಷಿ ನಾಶವಾಗಿದೆ. ಮಳೆಯ ಕೊರತೆ ಕಾರಣದಿಂದಲೇ ಈ ರೋಗ ಕಾಣಿಸಿಕೊಂಡಿದ್ದು, ಭತ್ತದ ಪೈರುಗಳು ಸಂಪೂರ್ಣವಾಗಿ ಒಣಗಿ ಹೋದಂತಾಗಿ ಬಿಳಿ ಬಣ್ಣಕ್ಕೆ ತಿರುಗಿದಂತಾಗಿವೆ. 

ಸರಿಯಾಗಿ ಮಳೆ ಬೀಳದ ಕಾರಣ ಬೆಳೆಗೆ ಸರಿಯಾಗಿ ನೀರು ದೊರೆಯದೆ ಹಾಗೂ ವಾತಾವರಣ ಬಿಸಿಯೇರಿದ ಕಾರಣ ಭತ್ತಗಳಿಗೆ ಬೆಂಕಿ ಗಾಳಿ ರೋಗ ಕಾಟ ಕಾಣಿಸಿಕೊಂಡಿದೆ. ಕೆಲವು ರೈತರು ಔಷಧಿ ಹೊಡೆದ ಕಾರಣ ಉಳಿದಂತಹ ಗಿಡಗಳಲ್ಲಿ ಕೇವಲ ಸಣ್ಣ ಸಣ್ಣ ತೆನೆಗಳು ಮಾತ್ರ ಬೆಳೆಯುತ್ತಿದೆ. ಇನ್ನು ಕೃಷಿ ಇಲಾಖೆಯ ಅಧಿಕಾರಿಗಳಿಂದ ಕೇವಲ ಬಾಯಿ ಮಾತಿನಲ್ಲಿ ಸರ್ವೇ ಹಾಗೂ ಪರಿಹಾರದ ಆಶ್ವಾಸನೆ ದೊರೆಯುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರೈತರ ಸಮಸ್ಯೆಗಳನ್ನು ಮಾತ್ರ ಪರಿಶೀಲಿಸಿಲ್ಲ. ಇದರಿಂದ ರೈತರಿಗೂ ಭಾರೀ ಸಮಸ್ಯೆಗಳಾಗತೊಡಗಿವೆ. 

ಉತ್ತರಕನ್ನಡ ಜಿಲ್ಲೆಯಲ್ಲಿ 67,719 ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದರಲ್ಲಿ 65,566 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ ಸೇರಿದಂತೆ ಪ್ರಮುಖ ಬೆಳೆ ಬೆಳೆಯಲಾಗಿದೆ. ಈ ಹಿಂದೆಯೇ ಶಿರಸಿ, ಯಲ್ಲಾಪುರ, ಮುಂಡಗೋಡು ಭಾಗದಲ್ಲಿ ನೈಸರ್ಗಿಕ ವಿಕೋಪ ಕೇಂದ್ರಕ್ಕೆ ಮಾಹಿತಿ ನೀಡಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಫಸಲಿನ ನಷ್ಟವಾಗಲಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ. 

300x250 AD

ಒಟ್ಟಿನಲ್ಲಿ ಸರಕಾರ ರೈತರ ಸಮಸ್ಯೆಗಳಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಿ ಅವರನ್ನು ಸಾಲದ ಕೂಪಕ್ಕೆ ಬೀಳದಂತೆ ನೋಡಿಕೊಳ್ಳಬೇಕಿದೆ.

* ನಾವು ಹಲವು ವರ್ಷಗಳಿಂದ ಭತ್ತದ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಈ ಭಾರಿ ಮಳೆಯ ಅಭಾವದಿಂದ ಭತ್ತದ ಗದ್ದೆಗಳು ಸಂಪೂರ್ಣ ಕೆಂಪಾಗಿ ರೋಗಕ್ಕೆ ತುತ್ತಾಗಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕು.

            – ರಾಮಕೃಷ್ಣ ಗೌಡ ( ಶಿರ್ವೆ ಗ್ರಾಮಸ್ಥ )

Share This
300x250 AD
300x250 AD
300x250 AD
Back to top