ದಾಂಡೇಲಿ: ಪಣಜಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಅನಮೋಡನಲ್ಲಿ ಅರಣ್ಯ ಇಲಾಖೆಯವರು ಪಿ.ಸಿ.ಸಿ.ಎಫ್. (ವನ್ಯಜೀವಿ) ರಾಜೀವ್ ರಂಜನ್ ಅವರ ಪತ್ರದ ಮೇರೆಗೆ ವಾಹನಗಳಿಂದ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಪ್ರವೇಶ ಶುಲ್ಕವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ, ನಗರದ ವನ್ಯಜೀವಿ ಇಲಾಖೆಯ ಕಾರ್ಯಾಲಯದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನೀಲೇಶ್ ಶಿಂದೆಯವರಿಗೆ ಜೋಯಿಡಾದ ಕಾಳಿ ಬ್ರಿಗೇಡ್ ನಿಂದ ಲಿಖಿತ ಮನವಿ ನೀಡಲಾಯಿತು.
ಮನವಿಯಲ್ಲಿ ರಸ್ತೆ ತೀವ್ರ ಹದಗೆಟ್ಟಿರುವುದು ಒಂದೆಡೆಯಾದರೇ, ಹೆದ್ದಾರಿ ಟೋಲ್ ಶುಲ್ಕವನ್ನು ಪಾವತಿಸುವುದರ ಜೊತೆಗೆ ಹೆಚ್ಚುವರಿಯಾಗಿ ವನ್ಯಜೀವಿ ಇಲಾಖೆಗೂ ಶುಲ್ಕ ತುಂಬಬೇಕಾಗಿರುವುದು ಹೊರೆಯಾಗಿರುವುದರಿಂದ ಈ ಕೂಡಲೇ ಈ ಶುಲ್ಕ ಸಂಗ್ರಹವನ್ನು ರದ್ದುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಇದರ ಮುಖ್ಯ ಸಂಚಾಲಕರಾದ ಸುನೀಲ್ ದೇಸಾಯಿ, ಪ್ರಮುಖರಾದ ಉಮೇಶ್ ವೇಳಿಪ್, ಸತೀಶ ನಾಯ್ಕ, ಕಿರಣ್ ನಾಯ್ಕ, ಪ್ರಭಾಕರ ನಾಯ್ಕ, ಸಮೀರ್ ಮುಜಾವರ, ನಾರಾಯಣ ಹೆಬ್ಬಾರ್ ಹಾಗೂ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.