ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಂಭ್ರಮ ಅ.15 ರಿಂದ 24ರ ತನಕ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿದೆ.
ಅಕ್ಟೋಬರ್ 15ರಂದು ಬೆಳಗ್ಗೆ 9 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಮತ್ತು ಪ್ರದೋಷ ಕಾಲದಲ್ಲಿ ಶ್ರೀಗಳು ಶ್ರೀಚಕ್ರರಾಧನೆಯನ್ನು ನೆರೆವೇರಿಸಲಿದ್ದಾರೆ. ಜತೆಗೆ ಶ್ರೀಮದ್ ದೇವಿ ಭಾಗವತ, ಚಂಡಿ ಸಪ್ತಶತಿ, ಋಗ್ವೇದ, ಸಾಮವೇದ, ಆಧ್ಯಾತ್ಮ ರಾಮಾಯಣ ಪಾರಾಯಣಗಳು ಮತ್ತು ಶತರುದ್ರಾಭಿಷೇಕ, ಶ್ರೀ ಸೂಕ್ತ, ಪುರುಷ ಸೂಕ್ತ, ದುರ್ಗಾ ಸುಕ್ತ, ದೇವಿ ಸೂಕ್ತ, ಪಾಠಗಳು ಹಾಗೂ ನವಗ್ರಹ ಬ್ರಹ್ಮಾಸ್ತ್ರ ಜಪಗಳು ನಡೆಯಲಿವೆ. ದಿನವೂ ದುರ್ಗಾ ಪೂಜೆ, 12:30ಕ್ಕೆ ಮಹಾಮಂಗಳಾರತಿ 2.30ರಿಂದ ಶ್ರೀದೇವಿ ಪುರಾಣ ಪ್ರವಚನ ಹಾಗೂ ರಾತ್ರಿ 9ಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ, ತೀರ್ಥ- ಪ್ರಸಾದ ವಿತರಣೆ ನಡೆಯಲಿದೆ.
ಅ.19ರಂದು ಲಲಿತಾ ಪಂಚಮಿ ನಿಮಿತ್ತ ಸಂಜೆ ಶತರುದ್ರಾಭಿಷೇಕ ಸಹಿತ ಮಹಾಪೂಜೆ, ಅ.20ರಂದು ಶಾರದಾ ಸ್ಥಾಪನೆ, ಅ.22ರಂದು ದುರ್ಗಾಷ್ಠಮಿ ಹಾಗೂ ಅ.23ರಂದು ಮಹಾನವಮಿ, ಲಕ್ಷ್ಮೀ ಪೂಜೆ, ಶ್ರೀಕ್ಷೇತ್ರಪಾಲ ಬಲಿ ನಡೆಯಲಿದೆ.
24ರಂದು ವಿಜಯದಶಮಿ ನಿಮಿತ್ತ ವಿದ್ಯಾರಂಭ, ಸಂಜೆ ಲಕ್ಷ್ಮೀ ನೃಸಿಂಹ ದೇವರ ಸೀಮೋಲ್ಲಂಘನ, ಶಮಿಪೂಜೆ ನಡೆಯಲಿದೆ. ರಾತ್ರಿ 8ಕ್ಕೆ ಅಷ್ಟಾವಧಾನ ಸೇವೆ, ಶ್ರೀಗಳಿಂದ ವಿಶೇಷ ಪ್ರಾರ್ಥನೆ, ಆಶೀರ್ವಚನ, ವಿಪ್ರ ಮಂತ್ರಾಕ್ಷತೆ ನಡೆಯಲಿದೆ.
ಅ.26ರಂದು ನವಚಂಡೀ ಹೋಮ ಮತ್ತು ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ, ಪೂರ್ಣಾಹುತಿ, ಮಹಾ ಪ್ರಸಾದ ವಿತರಣೆ ನಡೆಯಲಿದೆ.
ಅಕ್ಟೋಬರ್ 15ರಿಂದ 23 ತನಕ ಶರನ್ನವರಾತ್ರಿ ಸಾಂಸ್ಕೃತಿಕ ಉತ್ಸವ ಕೂಡ ಶ್ರೀಮಠದ ಸುಧರ್ಮ ಸಭಾಂಗಣದಲ್ಲಿ ನೆರವೇರಲಿದ್ದು, ಅ. 15ರಂದು ಸಂಜೆ 6.30ಕ್ಕೆ ಮಂಜುನಾಥ್ ಭಜಂತ್ರಿ ಹಾನಗಲ್ ಅವರಿಂದ ಶಹನಾಯಿ ವಾದನ, ನಾದ ಕಲಾ ಸಂಗೀತ ವಿದ್ಯಾಲಯ ಸ್ವರ್ಣವಲ್ಲಿಯಿಂದ ಸಂಗೀತ, ಮಾತೃ ಮಂಡಲ ಯೋಗ ಮಂದಿರ ಶಿರಸಿಯವರಿಂದ ಭಜನೆ ಕಾರ್ಯಕ್ರಮಗಳು ಜರುಗಲಿವೆ.
ಅ. 16ರಂದು ಕೃಷ್ಣ ಆನಂದ್ ಭಟ್ ದಾಯಿಮನೆ ಅವರಿಂದ ಹಿಂದುಸ್ತಾನಿ ಸಂಗೀತ, ಲಯನ್ಸ್ ಕ್ಲಬ್ ನಿಂದ ಭಜನೆ, ನಟರಾಜ ನೃತ್ಯ ಶಾಲೆಯಿಂದ ಭರತನಾಟ್ಯ, ಅ.17ರಂದು ಪ್ರಸಿದ್ಧ ಗಾಯಕ ಗಣೇಶ್ ದೇಸಾಯಿ ಅವರಿಂದ ಗಾಯನ, ನಮಿತಾ ಕುಲಕರ್ಣಿ ಭರತನಾಟ್ಯ, ಸೀತಾರಾಮ್ ನಾಯಕ್ ಹಳದಿಪುರ ಭಜನೆ ನಡೆಯಲಿದೆ.
ಅ.18ರಂದು ಸುದೇಶ್ ಭಟ್ ಯಲ್ಲಾಪುರ ಹಾರ್ಮೋನಿಯಂ ಸೋಲೊ, ಅನನ್ಯ ಅಶ್ವತ್ಥ ಹೆಗಡೆ ಶಿರಸಿ ಭರತನಾಟ್ಯ, ದುರ್ಗಾ ಭಜನಾ ಮಂಡಳಿ ತ್ಯಾರಗಲ್ ದಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದೆ. ಅ. 19ರಂದು ಶ್ರೀಧರ ಹೆಗಡೆ ಕಲಭಾಗವರಿಂದ ಹಿಂದುಸ್ತಾನಿ ಸಂಗೀತ, ರಾಜರಾಜೇಶ್ವರಿ ಯುವಕ ಯುವತಿ ಮಂಡಲ ಸೋಂದಾದಿಂದ ಭಜನೆ, ಲಯಾಭಿನಯ ಕಲ್ಚರ್ ಫೌಂಡೇಶನ್ ದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಅ.20ರಂದು ಸ್ವಾತಂತ್ರ್ಯ ಎ ಎಸ್ ಚಂದಾವರ ಸಂಗೀತ, ಮಾತೃ ಮಂಡಲ ಸ್ವರ್ಣವಲ್ಲಿಯಿಂದ ಭಜನೆ, ನಾಟ್ಯಕಲಾ ಸ್ವರ್ಣವಲ್ಲಿಯಿಂದ ಭರತನಾಟ್ಯ, ಅ.21 ರಂದು ನಾಗಶ್ರೀ ಭಟ್ ಮಂಜುಗುಣಿವರಿಂದ ಸಂಗೀತ, ಎಚ್ ಆರ್ ಶೃತಿ ಖಾಸಾಪಾಲ್ ಭರತನಾಟ್ಯ, ಕಾಳಿಕಾ ಭವಾನಿ ಭಜನಾ ಮಂಡಳಿಯಿಂದ ಭಜನೆ, ಅ.22ರಂದು ಕಾತ್ಯಾಯಿನಿ ಶರತ್ ಹೆಗಡೆ ಬೆಂಗಳೂರಿಂದ ಹಿಂದುಸ್ತಾನಿ ಸಂಗೀತ, ಇನ್ನರ್ವಿಲ್ ಕ್ಲಬ್ ನಿಂದ ಭಜನೆ, ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ಭರತನಾಟ್ಯ, ಅ.23ಕ್ಕೆ ಶೃತಿ ಭಟ್ಟ ಹಿಂದುಸ್ತಾನಿ ಸಂಗೀತ, ಕ್ಷಿತಿ ಕಲಾ ಕೇಂದ್ರ ಬೆಂಗಳೂರಿಂದ ಭರತನಾಟ್ಯ, ಮಹಾ ಗಣಪತಿ ಭಜನಾ ಮಂಡಳಿ ಜಕ್ಕೊಳ್ಳಿಯಿಂದ ಭಜನೆ ನಡೆಯಲಿದೆ. ಹಾರ್ಮೋನಿಯಂನಲ್ಲಿ ಪ್ರಕಾಶ ಹೆಗಡೆ ಯಡಹಳ್ಳಿ, ಮಹೇಶ್ ಭಟ್ ದಾಯಿಮನೆ, ಉನ್ನತಿ ಕಾಮತ್, ತಬಲಾದಲ್ಲಿ ಮಂಜುನಾಥ ನೆಬ್ಬೂರ್, ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ಗಣೇಶ್ ಗುಂಡ್ಕಲ್, ಆನಂದ್ ಭಟ್ಟ ದಾಯಿಮನೆ, ಕಿರಣ್ ಕಾನ್ಗೋಡ್, ಶರತ್ ಹೆಗಡೆ, ನಿರಂಜನ್ ಭಟ್ ಸಹಕಾರ ನೀಡಲಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ.