Slide
Slide
Slide
previous arrow
next arrow

ಭಾಗವತ ಕೆ.ಪಿ.ಹೆಗಡೆ ಅವರಿಗೆ ‘ಅನಂತಶ್ರೀ’ ಪ್ರಶಸ್ತಿ ಪ್ರದಾನ

300x250 AD

ಸಿದ್ದಾಪುರ: ಓರ್ವ ನಿಗರ್ವಿ ಕಲಾವಿದ‌ನ ಹೆಸರಿನಲ್ಲಿ ನೀಡುವ, ಒಡನಾಡಿ ಹೆಸರಿನ ಪ್ರಶಸ್ತಿ ದೊರಕಿರುವುದನ್ನು ಅನಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಪ್ರಸಿದ್ಧ ಭಾಗವತ, ಪ್ರಾಚಾರ್ಯ ಕೆ.ಪಿ.ಹೆಗಡೆ ಗೋಳಗೋಡ ಹೇಳಿದರು.

ತಾಲೂಕಿನ ಹೇರೂರಿನ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ನೀಡುವ ಅನಂತಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನನಗೆ ಅನೇಕ ಕಡೆ ಸಮ್ಮಾನ ಪುರಸ್ಕಾರ ಆಗಿದೆ. ಆದರೆ, ಹೇರೂರಿನ ದೇವಾಲಯದ ಸನ್ನಿಧಿಯಲ್ಲಿ ಅನಂತ ಹೆಗಡೆ ಅವರ ಹೆಸರಿನ ಪ್ರಶಸ್ತಿ ಸಿಗುತ್ತಿರುವದು ಅತ್ಯಂತ ಖುಷಿಯಾಗಿದೆ. ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ನಿರಂತರವಾಗಿರಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ, ಕಲೆಯಲ್ಲಿ ಆಸಕ್ತಿ ಉಳಿಸಿಕೊಂಡು ಬೆಳೆಸಬೇಕು. ಎಲ್ಲೆ ಇದ್ದರೂ ನಮ್ಮ ಕಲೆಯ ಉಳಿಸಿಕೊಳ್ಳಬೇಕು. ಎಲ್ಲೂ ಇಲ್ಲದ ಈ ಅಪರೂಪದ ಕಲೆ ಎಲ್ಲರೂ ಉಳಿಸಿಕೊಂಡು ಹೋಗಬೇಕು. ಮುಂದಿನ ಯುವ ಪೀಳಿಗೆಗೆ ಯಕ್ಷಗಾನದ ದಾರಿ ತೋರಿಸಬೇಕು. ಹಿರಿಯ ಕಲಾವಿದರ ಮಾತುಗಳನ್ನು ಯುವ ಕಲಾವಿದರು ಚಾಚೂ ತಪ್ಪದೇ ಬೆಳಸಿಕೊಳ್ಳಬೇಕು. ಕಲೆಯ ಬೆಳವಣಿಗೆಯಲ್ಲಿ ಕೆ.ಪಿ.ಹೆಗಡೆ ಅವರು ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿದ್ದಕ್ಕೆ ಅಭಿನಂದಿಸುತ್ತೇನೆ, ಶಿರಭಾಗುತ್ತೇನೆ. ಯಕ್ಷಗಾನ ಉಳಿಸಿ ಬೆಳೆಸಲು ಸರಕಾರದ ನೆರವನ್ನು ಕೂಡ ಒದಗಿಸಲು ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ನೆರವಾಗುತ್ತೇವೆ ಎಂದರು.

ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಮಾತನಾಡಿ, ವೇಷಧಾರಿಗಳು ಪಾತ್ರಧಾರಿಗಳಾಗಬೇಕು. ಚೌಕಿಯಲ್ಲಿ ಇದ್ದು ಕಲಾವಿದರಿಗೆ ರಂಗಸ್ಥಳ ತಿಳಿಸುತ್ತಿದ್ದವರು ಅನಂತ ಹೆಗಡೆ. ಭಾಗವತ, ಪ್ರಾಚಾರ್ಯರಾಗಿದ್ದ ಕೆ‌.ಪಿ.ಹೆಗಡೆ ಅವರಿಗೆ ಸಮ್ಮಾನಿಸುವದು ಖುಷಿಯಾಗಿದೆ. ಸಂಬಳಕ್ಕಾಗಿ ಬೀದಿಗಿಳಿಯುವವರ ನಡುವೆ ಅಪರೂಪದವರು ಗೋಳಗೋಡರು ಎಂದರು.

300x250 AD

ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ, ಯಕ್ಷಗಾನ ಹಾಗೂ ತಾಳಮದ್ದಲೆ ಜನರ ಸಂಸ್ಕೃತಿಯ ಬೇರು.ಯಕ್ಷಗಾನ ಸಮಾಜದಲ್ಲಿ ಮನರಂಜನೆ ಜೊತೆಗೆ ಆದರ್ಶ ಜೀವನವನ್ನು ಕೂಡ ನೀಡುತ್ತದೆ ಎಂದರು. ಅನಂತಮೂರ್ತಿ ಹೆಗಡೆ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಯಕ್ಷಗಾನಕ್ಕೆ ವಿಶೇಷ ಸ್ಥಾನ ಮಾನ ಇದೆ. ಅದು ನಮ್ಮ ಸಂಸ್ಕೃತಿ. ಅದರ ಉಳಿವಿಗೆ ಎಲ್ಲರ ಸಹಕಾರ ಬೇಕು ಎಂದರು.
ಸಿದ್ದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ನಾದಲೋಕ, ಭಾವ ಲೋಕ, ಜ್ಞಾನ ಲೋಕ ಒಳಗೊಂಡ ಕಲೆ ಯಕ್ಷಗಾನ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ.ಎಂ.ಭಟ್ಟ ಸಿದ್ದಾಪುರ, ಯಕ್ಷಗಾನ ಕ್ಷೇತ್ರ ಸಮಾಜಕ್ಕೆ ಅನನ್ಯ ಕೊಡುಗೆ‌ ನೀಡುತ್ತಿದೆ ಎಂದರು. ಭಾಗವತ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿ.ಆರ್.ಭಾಗವತ ತ್ಯಾರಗಲ್ ಸಮ್ಮಾನ ಪತ್ರ ವಾಚಿಸಿದರು. ಗಣೇಶ ವಂದಿಸಿದರು. ಗಣಪತಿ ಹೆಗಡೆ ನಿರ್ವಹಿಸಿದರು. ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಹೆಗಡೆ ತ್ಯಾರಗಲ್, ಲಲಿತಾ ಹೆಗಡೆ ಗೋಳಗೋಡ, ಪ್ರೀತಾ ಹೆಗಡೆ ಕೊಳಗಿ, ರಮೇಶ ಹೆಗಡೆ, ಗಾಯತ್ರಿ ಭಟ್ಟ ಇತರರು ಇದ್ದರು.

Share This
300x250 AD
300x250 AD
300x250 AD
Back to top