ಶಿರಸಿ: ಜೇನು ಕೃಷಿ ಯಾರೂ ಮಾಡಬಹುದು. ಆದರೆ ಅದರ ಯಶಸ್ಸಿಗೆ ಅವುಗಳ ಮೌಲ್ಯ ವರ್ಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ ಕೃಷಿ ಸಾಧಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹೇಳಿದರು.
ಅವರು ತಾರಗೋಡಿನ ಕಲ್ಲಳ್ಳಿ ಅವರ ಮನೆಯ ಆವಾರದ ಮಧುಬನದಲ್ಲಿ ಹುಬ್ಬಳ್ಳಿ, ಕಲಘಟಗಿ, ನವಲಗುಂದಗಳ
ರೈತರಿಗೆ ಜೇನು, ಔಷಧ ಸಸ್ಯಗಳ ತರಬೇತಿ ನೀಡಿ ಮಾತನಾಡಿದರು.
ಜೇನು ಕೃಷಿ ಹಾಗೂ ಮೌಲ್ಯ ವರ್ಧನೆ ಮಾಡಿದರೆ ಅನುಕೂಲ ಆಗುತ್ತದೆ. ಜಮೀನು ಇಲ್ಲದವರೂ ಜೇನು ಕೃಷಿ ಮಾಡಬಹುದು. ಮೌಲ್ಯ ವರ್ಧನೆ ಮಾಡಿದರೆ ರೈತನಿಗೆ ಲಾಭವಾಗುತ್ತದೆ ಎಂದರು.
ಜೇನಿನಿಂದ ಅನೇಕ ಉತ್ಪನ್ನ ಮಾಡಬಹುದು. ಮೇಣದಿಂದ ಲಿಪ್ ಬಾಂಬ್, ಮೊಂಬತ್ತಿ ಸೇರಿದಂತೆ ಅನೇಕ ಉತ್ಪನ್ನ ತಯಾರಿಸಬಹುದು. ಬಿ ಪೋಲನ್ ಬಳಸಿ ಸೋಪ್ ಕೂಡ ಮಾಡಬಹುದು.
ರಾಯಲ್ ಜೆಲ್ಲಿ ಕೂಡ ಬಳಸಿ ಅನೇಕ ಉತ್ಪನ್ನ ಮಾಡಬಹುದು. ಜೇನಿನ ಎಫಿ ಥೆರಪಿ ಕೂಡ ನಾವು ಮಾಡುತ್ತೇವೆ ಎಂದೂ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಇದೇ ವೇಳೆ ವಿವಿಧ ವನಸ್ಪತಿಗಳ ಪರಿಚಯ ಕೂಡ ಮಾಡಿದರು. ವನಸ್ಪತಿಗಳನ್ನು ಬೆಳೆಸುವದರಿಂದ ಜೇನಿಗೆ ಅದರಿಂದಾಗುವ ಲಾಭದ ವಿವರ ಕೂಡ ನೀಡಲಾಯಿತು. ಹುಬ್ಬಳ್ಳಿ, ಕಲಘಟಗಿ, ನರಗುಂದದ ತೋಟಗಾರಿಕಾ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. 160ಕ್ಕೂ ಅಧಿಕ ರೈತರು ತರಬೇತಿ ಪಡೆದರು.