ಹೊನ್ನಾವರ: ಅಕ್ರಮವಾಗಿ ಶರಾವತಿ ನದಿಯಲ್ಲಿ ಮರಳು ತೆಗೆದು ಸಾಗಿಸುತ್ತಿದ್ದ ಎಂಟು ಲಾರಿಗಳನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.
ತಾಲೂಕಿನ ಅಳ್ಳಂಕಿ ಗ್ರಾಮದಲ್ಲಿ ಎಂಟು ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶರಾವತಿ ನದಿಯಲ್ಲಿ ಮರಳನ್ನು ತೆಗೆದ ಅಕ್ರಮವಾಗಿ ಪ್ರತಿದಿನ ಶಿರಸಿ ಹಾಗೂ ಸಿದ್ದಾಪುರಕ್ಕೆ ಸಾಗಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಪ್ರತಿನಿತ್ಯ ಹಲವು ಲಾರಿಗಳು ಹೊನ್ನಾವರದಿಂದ ಮರಳನ್ನ ತೆಗೆದುಕೊಂಡು ಒಡಾಟ ನಡೆಸುತ್ತಿದೆ ಎನ್ನುವ ಆರೋಪ ಬಂದ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ರಾಷ್ಟ್ರೀಯ ಹಸಿರು ಪೀಠ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಮಾಡಲಾಗಿದ್ದು ಇದರ ನಡುವೆ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಪ್ರಕರಣ ಆಗಾಗ ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಹೊನ್ನಾವರ ಭಾಗದಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುವ ದೂರು ಸಾಕಷ್ಟು ಕೇಳಿ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಪ್ರಾರಂಭಿಸಿದ್ದಾರೆ.