ಗೋಕರ್ಣ: ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನೊಮ್ಮೆ ಭಾರತ ಪ್ರಧಾನಿಯಾಲಿ ಎಂದು ಪ್ರಾರ್ಥಿಸಿ ಅನಂತಮೂರ್ತಿ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಇಲ್ಲಿನ ಅಹಲ್ಯಬಾಯಿ ಹೋಳ್ಕರ ಛತ್ರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಹಾರುದ್ರಯಾಗ ಬುಧವಾರ ಪ್ರಾರಂಭವಾಗಿದೆ.
ವೇ. ಪರಮೇಶ್ವರ ಮಾರ್ಕಾಂಡೆ ನೇತೃತ್ವದಲ್ಲಿ ಹಿರಿಯ ವೇದ ವಿದ್ವಾಂಸ ಕೃಷ್ಣ ಷಡಕ್ಷರಿ ಆಚಾರ್ಯತ್ವದಲ್ಲಿ ನೂರಕ್ಕೂ ಅಧಿಕ ವೈದಿಕರು ಪಾಲ್ಗೊಂಡಿದ್ದಾರೆ. ಗಣೇಶ ಪೂಜೆ , ಮಹಾಸಂಕಲ್ಪ , ಸೇರಿದಂತೆ ವಿವಿಧ ದೈವಿಕ ಕಾರ್ಯಕ್ರಮ ಮೊದಲ ದಿನ ನಡೆದಿದ್ದು, ಶುಕ್ರವಾರ ಮಹಾರುದ್ರ ಹೋಮ, ಪೂರ್ಣಾಹುತಿ ನಡೆಯಲಿದೆ. ಕುಮಾರ ಮಾರ್ಕಾಂಡೆ, ಜನಾರ್ಧನ ಆಚಾರ್ಯ ಮತ್ತಿತರರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ.
ವೇ.ಕೃಷ್ಣ ಭಟ್ ಷಡಕ್ಷರಿ ಮಹಾರುದ್ರ ಯಾಗದ ಕುರಿತು ಮಾತನಾಡಿ ಸಾಕ್ಷಾತ್ ಪರಶಿವನ ಆತ್ಮಲಿಂಗವಿರುವ ಪುಣ್ಯ ಕ್ಷೇತ್ರದಲ್ಲಿ ಶಿವನ ಸೇವೆ ಮಾಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ . ಇಂತಹ ಕ್ಷೇತ್ರದಲ್ಲಿ ಮಹಾರುದ್ರಯಾಗ ನಡೆಸಲಾಗುತ್ತಿದೆ ಜಗತ್ತು ಮತ್ತು ನಮ್ಮ ದೇಶಕ್ಕೆ ಒಳಿತಾಗಿ, ಪ್ರಧಾನಿಯವರಿಗೆ ರಾಷ್ಟ್ರವನ್ನು ಮತ್ತಷ್ಟು ಬಲಗೊಳಿಸಲು ಶಕ್ತಿ ನೀಡಲಿ ಎಂದು ಸಂಕಲ್ಪ ಮಾಡಿ ಕಾರ್ಯಕ್ರಮ ಪ್ರಾರಂಭವಾಗಿದ್ದು ಅದರಂತೆ ಕಾರ್ಯ ಸಿದ್ದಿಯಾಗುತ್ತದೆ ಎಂದು, ಮಹಾರುದ್ರದ ಮಹತ್ವವನ್ನು ವಿವರಿಸಿದರು.
ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟನ್ ಅನಂತಮೂರ್ತಿ ಹೆಗಡೆ ಮಾತನಾಡಿ ಪ್ರಪಂಚದ ಒಡೆಯನಾದ ಪರಶಿವನ ಆತ್ಮಲಿಂಗ ಇರುವ ಪವಿತ್ರ ಸ್ಥಳದಲ್ಲಿ ಭವ್ಯ ಭಾರತಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಘೋಷವಾಕ್ಯದೊಂದಿಗೆ ದೇಶವನ್ನು ವಿಶ್ವ ಗುರುವನ್ನಾಗಿ ಮಾಡಿದ ಧೀಮಂತ ನಾಯಕ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಹಾಗೂ ಭಗವಂತ ಪರಿಪೂರ್ಣ ಆರೋಗ್ಯ, ಆಯಸ್ಸು ನೀಡಲಿ ಎಂದು ಬೇಡಿಕೊಳ್ಳುವುದರ ಜೊತೆ ಪ್ರಪಂಚದಲ್ಲೂ ರೋಗರುಜಿನದಿಂದ ಮುಕ್ತವಾಗಿ ಸರ್ವರಿಗೂ ಒಳ್ಳೆಯದಾಗಲಿ ಎಂದು ಸಂಕಲ್ಪದೊಂದಿಗೆ ನಡೆಯುತ್ತಿದೆ ಎಂದರು.