ಶಿರಸಿ: ಶಿರಸಿ ಸೈಕ್ಲಿಂಗ್ ಕ್ಲಬ್‌ನ 8 ಜನ ಸದಸ್ಯರು ಅತಿ ದೊಡ್ಡ ಸಾಧನೆಗೈದಿದ್ದು, ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಸೈಕಲ್ ಮೂಲಕ ಬರೋಬ್ಬರಿ 300 ಕಿ.ಮೀ ಕ್ರಮಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿ, ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ.
ಶಿರಸಿಯಿಂದ ಭಾನುವಾರ ಬೆಳಗ್ಗೆ ಹೊರಟ 8 ಜನರ ತಂಡವು ಸೋಮವಾರ ಮಧ್ಯಾಹ್ನ 300 ಕಿ.ಮೀ ದೂರದ ಧರ್ಮಸ್ಥಳಕ್ಕೆ ತಲುಪಿದೆ. ನಂತರ ಶ್ರೀ ಮಂಜುನಾಥನ ದರ್ಶನ ಪಡೆದು, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು, ನೆನಪಿನ ಕಾಣಿಕೆ ಸ್ವೀಕರಿಸಿದೆ.
ತಂಡವು ಮೊದಲ ದಿನ ಶಿರಸಿ, ಸಾಗರ , ತೀರ್ಥಹಳ್ಳಿ, ಆಗುಂಬೆ ದಾರಿಯಾಗಿ ಸಾಗಿ ಸೋಮೇಶ್ವರ ವೆಂಕಟರಮಣ ದೇವಸ್ಥಾನದಲ್ಲಿ ವಸತಿ ಪಡೆದಿದೆ. ಪುನಃ ಮರುದಿನ ಸೋಮೇಶ್ವರದಿಂದ ಬಜಗೋಳಿ, ಬೆಳ್ತಂಗಡಿ, ಉಜಿರೆ ದಾರಿಯಾಗಿ ಧರ್ಮಸ್ಥಳಕ್ಕೆ ತಲುಪಿದೆ. ಈ ತಂಡದಲ್ಲಿ ಡಾ. ವಿಕ್ರಮ ಹೆಗಡೆ, ವಿನಾಯಕ ಪ್ರಭು, ನಾಗರಾಜ ಭಟ್ಟ, ದೀಪಕ ಕಾಮತ್, ರಾಹುಲ್ ಹೆಗಡೆ, ಯೋಗೀಶ ಭಟ್ಟ, ಗೌರವ ಪ್ರಭು, ಗುರುರಾಜ ಹೆಗಡೆ ಇದ್ದರು. ಇವರ ಸಾಧನೆಗೆ ಶಿರಸಿ ಜನತೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.