ನವದೆಹಲಿ: ಸಕಲ ಹಿಂದೂಗಳ ಅಸ್ಮಿತೆಯಂತಿರುವ ಅಯೋಧ್ಯೆಯ ಶ್ರೀರಾಮಚಂದ್ರನ ಜನ್ಮಭೂಮಿಯಲ್ಲಿ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ 2024ರ ಜನವರಿ 22 ರಂದು ನಡೆಯಲಿದೆ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಜ. 22 ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದರೆ, ಜ.20 ರಿಂದ 24 ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿಯೇ ಇರಲಿದ್ದಾರೆ.
ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಅವರು ಭಾಗಿಯಾಗಲಿದ್ದಾರೆ. ಏಷ್ಯಾನೆಟ್ ಗ್ರೂಪ್‌ನ ಕಾರ್ಯನಿರ್ವಾಹಕ ಚೇರ್ಮನ್ ರಾಜೇಶ್ ಕಾಲ್ರಾ ಅವರೊಂದಿಗಿನ ಸಂದರ್ಶನದ ವೇಳೆ ಶ್ರೀರಾಮ ಜನ್ಮಭೂಮಿಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಎಕ್ಸ್‌ಕ್ಲೂಸಿವ್ ಆಗಿ ಈ ಮಾಹಿತಿ ನೀಡಿದ್ದರು. ‘ಜ. 15 ರಿಂದ 24 ರವರೆಗೆ ‘ಅನುಷ್ಠಾನ’ ನಡೆಯಲಿದ್ದು, ಈ ವೇಳೆ ‘ಪ್ರಾಣ ಪ್ರತಿಷ್ಠೆ’ ಕೂಡ ನಡೆಯಲಿದೆ. ಪ್ರಧಾನಿ ಮೋದಿ ಆಗಮನದ ದಿನಾಂಕ ಕೂಡ ನಿಗದಯಾಗಿದೆ. ಜ. 22ರಂದು ಬರಲಿದ್ದು, ಜ. 22ರಂದು ‘ಪ್ರಾಣ ಪ್ರತಿಷ್ಠೆ’ ಕೂಡ ನಡೆಯಲಿದೆ. ಇದಕ್ಕಾಗಿ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಎಂದು ಅಯೋಧ್ಯೆಯ ರಾಮಜನ್ಮಭೂಮಿ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಇತ್ತೀಚೆಗೆ ಏಷ್ಯಾನೆಟ್ ಗ್ರೂಪ್ ಜೊತೆಗಿನ ಸಂದರ್ಶನದ ವೇಳೆ ವಿವರವಾಗಿ ಮಾತನಾಡಿದ್ದ ನೃಪೇಂದ್ರ ಮಿಶ್ರಾ, ರಾಮಜನ್ಮಭೂಮಿಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದ್ದರು. ಇದೇ ವೇಳೆ ಬಹುತೇಕವಾಗಿ ಜ. 22 ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಬಹುದು ಎಂದು ತಿಳಿಸಿದ್ದರು. ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಬರೆದಿದ್ದ ಪತ್ರಕ್ಕೆ ಉತ್ತರ ಸಿಕ್ಕಿದ್ದು, ಜ.22ರ ದಿನವನ್ನೇ ನಿಗದಿ ಮಾಡುವಂತೆ ಸೂಚನೆ ನೀಡಲಾಗಿದೆ. ಅದರೊಂದಿಗೆ ಭವ್ಯ ಶ್ರೀರಾಮ ಮಂದಿರ ಜ. 22 ರಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ.
ಶ್ರೀರಾಮ ಮಂದಿರದ ಗ್ರೌಂಡ್ ಫ್ಲೋರ್ 2023ರ ಡಿಸೆಂಬರ್ ವೇಳೆಗೆ ಅಂತ್ಯಗೊಳ್ಳಲಿದೆ. ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಟಾಪನೆ ಬಳಿಕ ಇನ್ನೂ ಕೆಲ ಕೆಲಸಗಳು ಮುಂದುವರಿಯಲಿದೆ. ಆದರೆ, ಪ್ರಾಣ ಪ್ರತಿಷ್ಠಾಪನೆ ಆದ ಬಳಿಕ, ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುವ ಅವಕಾಶ ನೀಡಲಾಗುತ್ತದೆ.