ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಮಾರಿ; ತಮಿಳುನಾಡಿಗೆ ಉಪಕಾರಿಯಾಗಿ ನಡೆದುಕೊಂಡಿದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಟೀಕಿಸಿದರು.
ಬೆಂಗಳೂರು ಮಹಾನಗರದ ಭವಿಷ್ಯದ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಜಾರಿ ಮಾಡಲು ಆಗ್ರಹಿಸಿ ಬಿಜೆಪಿ ವತಿಯಿಂದ ನಡೆದ ತೀವ್ರ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಸೋನಿಯಾ ಗಾಂಧಿಯವರ ಕೈಚಳಕ ಮತ್ತು ಸೂಚನೆಯಿಂದ ಐಎನ್‍ಡಿಐಎ ನಾಯಕರನ್ನು ಖುಷಿಪಡಿಸುವ ಉದ್ದೇಶದಿಂದ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರವು ರಾಜ್ಯದ ಹಿತವನ್ನು ಸಂಪೂರ್ಣ ಕಡೆಗಣಿಸಿದೆ. ತಮಿಳುನಾಡಿನ ಹಿತ ಕಾಪಾಡಲು ಮುಂದಾಗಿದೆ ಎಂದು ಆಕ್ಷೇಪಿಸಿದರು.
ನಮಗೆ ಕುಡಿಯುವ ನೀರಿಗೂ ನೀರಿಲ್ಲ. ನಮ್ಮ ರೈತರ ಬೆಳೆಗಳಿಗೂ ನೀರಿಲ್ಲ. ಬೇಲಿಯೇ ಹೊಲವ ಮೇಯ್ದೊಡೆ ಎಂಬಂತೆ ಸರಕಾರವೇ ಹಫ್ತಾ ವಸೂಲಿಗೆ ಇಳಿದರೆ ದೂರು ಯಾರಿಗೆ ಕೊಡೋಣ ಎಂದು ಅವರು ಪ್ರಶ್ನಿಸಿದರು. ನಾಳೆ ನಡೆಯುವ ಹೋರಾಟಕ್ಕೆ ಬಿಜೆಪಿ ಪೂರ್ಣ ಪ್ರಮಾಣದ ಬೆಂಬಲ ಕೊಡಲಿದೆ ಎಂದು ಅವರು ತಿಳಿಸಿದರು.
ನಮ್ಮ ನೀರು, ನಮ್ಮ ನಾಡನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಅವರು ಹೇಳಿದರು. ಮುಂದಾಲೋಚನೆ ಇಲ್ಲದೆ ನೀರು ಬಿಡುತ್ತಿರುವುದು ರಾಜ್ಯದ ಜನರ ದುರ್ದೈವ ಎಂದು ಸಿ.ಟಿ.ರವಿ ಅವರು ಆಕ್ಷೇಪಿಸಿದರು. ತಕ್ಷಣವೇ ನೀರು ಬಿಡುವುದನ್ನು ನಿಲ್ಲಿಸಲು ಆಗ್ರಹಿಸಿದರು.
ಬಳಿಕ ಬಿಜೆಪಿ ನಿಯೋಗವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್‍ಮನ್ ರವರಿಗೆ ಮನವಿ ಸಲ್ಲಿಸಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಒತ್ತಾಯಿಸಿತು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣಗೌಡ ಮತ್ತಿತರರು ಈ ನಿಯೋಗದಲ್ಲಿದ್ದರು.