ಕುಮಟಾ: ಕುಮಟಾ ಪಟ್ಟಣದ ಮಸೀದಿಯೊಂದರ ಮೌಲಾನ ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳದ ಮೌಲಾನಾ ಅಬ್ಬುಸ್ ಸಮದ್ ಜಿಯಾಯಿ (25) ಎಂಬುವವನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಆರೋಪಿಯನ್ನು ಬಂಧಿಸಲಾಗಿದೆ. ಸೆ.23ರ ರಾತ್ರಿ 8 ಗಂಟೆ ಸುಮಾರಿಗೆ ಖುರಾನ್ ಓದಲು ಬಂದ ಬಾಲಕನ ಬಟ್ಟೆ ಕಳಚಿ, ಗುಪ್ತಾಂಗ ಸ್ಪರ್ಶಿಸಿ, ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕನ ತಂದೆ ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಸಹ ಇದೇ ರೀತಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕುಮಟಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಧರ್ಮಗುರುಗಳ ಸ್ಥಾನದಲ್ಲಿರುವ ಮೌಲಾನ ಖುರಾನ್ ಅಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಮೇಲೆ ಈ ರೀತಿಯ ಲೈಂಗಿಕ ದೌರ್ಜನ್ಯ ಎಸಗಿದರೆ, ಮಸೀದಿ ಹಾಗೂ ಧರ್ಮಗುರುಗಳ ಮೇಲೆ ಅಪವಿಶ್ವಾಸ ಮೂಡುವಂತಾಗುತ್ತದೆ. ಇಂಥ ಮೌಲಾನಾಗೆ ತಕ್ಕ ಶಾಸ್ತಿ ಮಾಡಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.