ನವದೆಹಲಿ: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪಾಕಿಸ್ಥಾನ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಕಾಶ್ಮೀರ ವಿಷಯವನ್ನು ಎತ್ತಿದ್ದು, ಇದಕ್ಕೆ ಭಾರತವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನ ಉದ್ದೇಶಿಸಿ ಶುಕ್ರವಾರ ಮಾತನಾಡಿದ್ದ ಕಾಕರ್, ಭಾರತ-ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿಷಯವೇ ನಿರ್ಣಾಯಕವಾದುದು ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಕಾರ್ಯದರ್ಶಿ ಪೆಟಲ್ ಗೆಹಲೋಟ್ ಅವರು, ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಆಧಾರ ರಹಿತ ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡುವ ಸಾಮಾನ್ಯ ತಪ್ಪಿತಸ್ಥ ರಾಷ್ಟ್ರವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರದಲ್ಲಿ ತಾನು ಹೊಂದಿರುವ ಹೀನಾಯ ದಾಖಲೆಯಿಂದ ಬೇರೆಡೆಗೆ ಗಮನ ಸೆಳೆಯುವ ಸಲುವಾಗಿ ಪಾಕಿಸ್ತಾನ ಹೀಗೆ ಮಾಡುತ್ತಿದೆ ಎಂಬುದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ಇತರ ಬಹು ರಾಷ್ಟ್ರೀಯ ಸಂಘಟನೆಗಳಿಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.
ಪಾಕಿಸ್ತಾನವು ಭಾರತದ ಆಕ್ರಮಿತ ಪ್ರದೇಶಗಳನ್ನು ಖಾಲಿ ಮಾಡಬೇಕು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಅಲ್ಪಸಂಖ್ಯಾತರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸಬೇಕು ಎಂದು ಅವರು ಪಾಕಿಸ್ಥಾನಕ್ಕೆ ಆಗ್ರಹಿಸಿದರು.
“ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಯುಟಿಗಳಿಗೆ ಸಂಬಂಧಿಸಿದ ವಿಷಯಗಳು ಸಂಪೂರ್ಣವಾಗಿ ಭಾರತದ ಆಂತರಿಕವಾಗಿವೆ” ಎಂದು ಪೆಟಲ್ ಗಹ್ಲೋಟ್ ಹೇಳಿದರು.