Slide
Slide
Slide
previous arrow
next arrow

TSS ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಜಡೆಯವರ ಮನೆಗೆ TSS ನೂತನ ಆಡಳಿತ ಮಂಡಳಿ ಭೇಟಿ

300x250 AD

ಶಿರಸಿ: ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಸೆಪ್ಟೆಂಬರ್ 21 ವಿಶೇಷ ದಿನ, ಇಂದಿಗೆ ನೂರು ವರ್ಷಗಳ ಹಿಂದೆ ಶಿರಸಿಯ ತೋಟಗಾರರ ಮಾರಾಟ ಸಹಕಾರಿ ಸಂಘ (ಟಿ.ಎಸ್.ಎಸ್) ಬೆಳಗಾವಿಯ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಆಗಿದೆ. 1923 ಸೆಪ್ಟೆಂಬರ್ 24 ರಿಂದ ಕಾರ್ಯರಂಭ ಮಾಡಿದೆ. 1913ರಲ್ಲಿ ವೆಂಕಟರಾವ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಶಿರಸಿ ತೋಟಗಾರರ ಸಹಕಾರ ಖರೀದಿ, ವಿತರಣೆ ಮತ್ತು ಪತ್ತಿನ ಸಂಘ ಆರಂಭವಾಗಿತ್ತು. ಕೃಷಿಕರ ಅನುಕೂಲಕ್ಕೆ ತಕ್ಕಂತೆ ಈ ಸಂಘವನ್ನು ವಿಭಾಗಿಸಿ ತೋಟಗಾರರ ಮಾರಾಟ ಸಹಕಾರಿ ಸಂಘ 1923ರಲ್ಲಿ ಜನ್ಮ ತಳೆಯಿತು. ಸೊರಬ ಮೂಲದ ಮದ್ವರಾವ್ ಸ್ವಾಮಿರಾವ್ ಜಡೆ ಇದರ ಪ್ರಥಮ ಅಧ್ಯಕ್ಷರಾದರು.

ಶಿವಮೊಗ್ಗ ಜಿಲ್ಲೆಯ ಜಡೆ ಗ್ರಾಮದ ಮದ್ವರಾವ್ ಜಡೆ ಶಿರಸಿಯ ಜೊತೆಗೆ ಮುಂಚಿನಿ0ದಲೂ ವ್ಯಾಪಾರಿ ಸಂಬ0ಧ ಹೊಂದಿದ್ದವರು. ಉನ್ನತ ಶಿಕ್ಷಣ ಪಡೆದು ವಕೀಲಿ ವೃತ್ತಿ ಜೊತೆಗೆ ಅಡಿಕೆ, ಕಾಳು ಮೆಣಸು ವ್ಯಾಪಾರವನ್ನು ಶಿರಸಿಯಲ್ಲಿ ನಡೆಸಿದ್ದರು. ಶಿರಸಿಯ ಲಿಂಗದಕೋಣದ ಸನಿಹದಲ್ಲಿ ಅಡಿಕೆ ಕೃಷಿಕರಾಗಿ ವಾಸವಾಗಿದ್ದರು. ಪ್ರತಿಷ್ಠಿತ ನಿಲೇಕಣಿ ಕುಟುಂಬದ ಜೊತೆಗೆ ಅನ್ಯೋನ್ಯ ಸಂಬ0ಧ ಹೊಂದಿದ್ದವರು.
ದೇಶದಲ್ಲಿ ಸಹಕಾರಿ ಸಂಘ ಪತ್ತು ಪೂರೈಸಿದರೆ ಮಾತ್ರ ಸಾಲದು, ಕೃಷಿಕರ ಇನ್ನಿತರ ಅಗತ್ಯ ಪೂರೈಸಬೇಕೆಂಬ ಯೋಚನೆ ಶುರುವಾಗಿದ್ದ ಸಂದರ್ಭ ಅದು. ಶಿರಸಿಯಲ್ಲಿ ಅರ್ಬನ್ ಬ್ಯಾಂಕ್ ಆರಂಭವಾಗಿತ್ತು.ಈ ಸಹಕಾರಿ ಸಂಸ್ಥೆ ಕಟ್ಟಿದವರ ಜೊತೆಗೆ ಜಡೆ ಕುಟುಂಬಕ್ಕೆ ಸಹಜ ಒಡನಾಟ. ಅಂದಿನ ಸಹಕಾರಿಗಳು, ಸಾಮಾಜಿಕ ಧುರೀಣರಾದ ವೆಂಕಟರಾವ್ ನಿಲೇಕಣಿ, ರಾವ್ ಬಹದ್ದೂರ್ ಪುಂಡಲೀಕ ರಾವ್ ಪಂಡಿತ್, ಅಕದಾಸ್ ಭಟ್, ಕೇಶವೈನ್ ಮುಂತಾದ ಹಿರಿಯರೆಲ್ಲ ಸೇರಿ ಅಡಿಕೆ ಕೃಷಿಕರ ಅನುಕೂಲಕ್ಕೆ ಶಿರಸಿ ತೋಟಗಾರರ ಸಹಕಾರ ಖರೀದಿ, ವಿತರಣೆ ಮತ್ತು ಪತ್ತಿನ ಸಂಘ ಆರಂಭಿಸಿದ್ದರು. ಕೃಷಿಕರ ಅನುಕೂಲಕ್ಕೆ ತೋಟಗಾರರ ಸಹಕಾರ ಖರೀದಿ, ಮಾರಾಟ ಮತ್ತು ಪತ್ತಿನ ಸಂಘ ವಿಭಾಗಿಸಿ ಟಿ ಎಸ್ ಎಸ್ ಸಂಸ್ಥೆ ಜನಿಸಿತು. ಮೊದಲು 18 ಸದಸ್ಯರು, 280ರೂಪಾಯಿ ಷೇರು ಬಂಡವಾಳ ತೊಡಗಿಸಿ ಪ್ರಥಮ ವರ್ಷದ ನಿಕ್ಕೀ ಲಾಭ 49ರೂಪಾಯಿಗಳು! 1916-23ರ ವರೆಗೆ ತೋಟಗಾರ ಪತ್ತಿನ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಜಡೆಯವರು ನೂತನ ಟಿ ಎಸ್ ಎಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದರು. ಮುಂದೆ 1923-31ರ ವರೆಗೆ ಕಾರ್ಯನಿರ್ವಹಿಸಿದರು. 1931-38ರವರೆಗೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದರು.

1919-1931 ರ ಸಮಯವೆಂದರೆ ಕೃಷಿಕರ ಪಾಲಿನ ಕರಾಳ ದಿನಗಳು. ಮೈಲಿ, ಪ್ಲೇಗ್ ನಂತಹ ಸಾಂಕ್ರಾಮಿಕ ರೋಗಗಳು ತೀವ್ರವಾಗಿದ್ದ ಸಂದರ್ಭವದು. ಹೊತ್ತಿನ ತುತ್ತಿಗೆ ತತ್ವಾರವಾದ ಕಾಲ. ರಂಗೂನ್ ಅಕ್ಕಿ ತಂದು ಹಸಿವು ಪರಿಹರಿಸುವ ಪ್ರಯತ್ನ ನಡೆದಿತ್ತು. ಹಲಸು, ಬಾಳೆಕಾಯಿ ತಿಂದು ಬದುಕುವ ಪರಿಸ್ಥಿತಿ. ವನ್ಯ ಜೀವಿಗಳ ಹಾವಳಿ, ಕೊಳೆ ರೋಗ, ಅಡಿಕೆ ಬೆಲೆ ಕುಸಿತ, ವ್ಯಾಪಾರಿಗಳ ಹಿಡಿತ, ವಿಪರೀತ ಸಾಲ, ಇದಲ್ಲದೇ ಸ್ವಾತಂತ್ರ‍್ಯ ಚಳುವಳಿಯ ಕಾಲದ ಬ್ರಿಟಿಷ್ ದಬ್ಬಾಳಿಕೆ ಜೋರಾಗಿತ್ತು. ಕೃಷಿಕರ ಅಭಿವೃದ್ಧಿಗೆ ಜನಿಸಿದ ಸಂಘಗಳು ಆರ್ಥಿಕ ಹೊಡೆತ ತಾಳದೆ ಹಲವು ನೆಲಕಚ್ಚಿದವು. ತೋಟಗಾರ ಸಹಕಾರಿ ಸಂಘವನ್ನು ಆರ್ಥಿಕವಾಗಿ ಮೇಲೆತ್ತುವ ಕುರಿತು ಜಡೆಯವರು ಈ ಸಂದರ್ಭದಲ್ಲಿ ವಿಶೇಷ ಪ್ರಯತ್ನಕ್ಕೆ ಮುಂದಾದರು. ಕುಮಟಾ ಅಡಿಕೆ ಮಾರಾಟ ಸಹಕಾರಿ ಸಂಘ ಕಟ್ಟಿದ ಜಿ. ಕೆ. ಹೆಗಡೆಯವರಲ್ಲಿ ಸಂಘ ಸುಧಾರಣೆಗೆ ವರದಿ ನೀಡಲು ವಿನಂತಿಸಿದರು.ಶಿರಸಿ, ಸಿದ್ದಾಪುರ, ಯಲ್ಲಾಪುರ ಪ್ರದೇಶದ ಹಳ್ಳಿ ಸುತ್ತಾಡಿ ವರದಿ ನೀಡುವ ಕಾರ್ಯ ಆರಂಭವಾಯಿತು.ಜಿಲ್ಲಾ ಸಹಕಾರಿ ಸಂಸ್ಥೆಯ ವಿ. ಎಸ್. ಹಬ್ಬು, ಜಿ.ಜಿ. ಶಾಸ್ತ್ರೀ ಇವರ ಸಹಕಾರ ಪಡೆದು ಜಿ.ಕೆ. ಹೆಗಡೆ ಸಹಕಾರಿ ಸಂಘವನ್ನು ಅಭಿವೃದ್ದಿ ಪಡಿಸುವ ಯೋಜನೆ ರೂಪಿಸಿದರು. ಪ್ರಮುಖ ಸಲಹೆ ನೀಡಿದರು. ಹಳ್ಳಿಗರ ವಿಶ್ವಾಸ ಗಳಿಸಿದವರು ಅಧ್ಯಕ್ಷರಾಗಿ ಕಾರ್ಯ ಮಾಡಬೇಕು. ಅಡಿಕೆ ವ್ಯಾಪಾರದ ಜ್ಞಾನ ಇರಬೇಕು, ಆದರೆ ಅವರು ವ್ಯಾಪಾರ ಮಾಡಬಾರದು. ಆಡಳಿತ ಮಂಡಳಿಯ ನಿರ್ದೇಶಕರಾದವರು ಕೂಡಾ ವ್ಯಾಪಾರ ಮಾಡಬಾರದು,ಸಂಘದಲ್ಲಿ ಹಣವಿಲ್ಲದೇ ರೈತರಿಗೆ ಅವರ ಅಡಿಕೆ ಮಾರಾಟದ ಹಣ ನೀಡಲು ಅಸಾಧ್ಯವಾದರೆ ಅವರ ಹಣಕ್ಕೆ ಬಡ್ಡಿ ಕೊಡಬೇಕು,ಸಂಘದಲ್ಲಿ ಅಡಿಕೆ ಶಿಲ್ಕು ಇಡುವ ರೈತರಿಗೆ ಸರಿಯಾಗಿ ತೂಕ ವಿವರ ನೀಡಬೇಕು, ಅವರ ಕಣ್ಣೆದುರೇ ತೂಗಬೇಕು. ಮಾರುಕಟ್ಟೆ ದರಗಳನ್ನು ಕಾಲಕಾಲಕ್ಕೆ ರೈತರಿಗೆ ತಿಳಿಸಬೇಕು, ಯೋಗ್ಯ ಕಾರ್ಯದರ್ಶಿ ನೇಮಿಸಬೇಕು, ಮನಸ್ಸಿಲ್ಲದ ವ್ಯಕ್ತಿಗಳನ್ನು ಆಡಳಿತ ಮಂಡಳಿಗೆ ಒತ್ತಾಯದಿಂದ ತಂದರೆ ಪ್ರಗತಿ ಸಾಧಿಸಲು ಯಾವತ್ತೂ ಸಾಧ್ಯವಿಲ್ಲ ಎಂದು ಜಿ. ಕೆ. ಹೆಗಡೆ ಸಮಿತಿ ಟಿ ಎಸ್ ಎಸ್ ಗೆ ವರದಿ ಸಲ್ಲಿಸಿತು.

ಕೃಷಿಕರಿಗೆ ಅಗತ್ಯವಾದ ಉಪ್ಪು,ಹತ್ತಿ ಕಾಳು, ಮೆಣಸು, ದಿನಸಿ ಪೂರೈಸುವ ಕಾರ್ಯಗಳು ಇದೇ ಸಮಯದಲ್ಲಿ ಶುರುವಾದವು. ಪ್ರತೀ ವರ್ಷ ಮ್ಯಾನೇಜಿಂಗ್ ಡೈರೆಕ್ಟರ್ ಚುನಾವಣೆ ನಡೆಯುತ್ತಿತ್ತು. ಇದು ಮುಂದೆ ಹತ್ತು ವರ್ಷಕ್ಕೆ ಒಮ್ಮೆ ನಡೆಸುವ ಪ್ರಸ್ತಾಪವಾಯಿತು. 1931ರವರೆಗೆ ಅಧ್ಯಕ್ಷರಾದ ಜಡೆಯವರು ನಂತರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದರು.1938ರಲ್ಲಿ ಜಡೆಯವರು ಆಕಸ್ಮಿಕ ನಿಧನರಾದರು.
ತೋಟಗಾರ ಸಹಕಾರಿ ಸಂಘದ ಕಳೆದ ನೂರು ವರ್ಷಗಳ ಸಮಯದಲ್ಲಿ ಮದ್ವರಾವ್ ಜಡೆ (1923-31), ಗಣಪತಿ ಹೆಗಡೆ ಲಿಂಗದಕೋಣ (1931-37),ಪರಮೇಶ್ವರ ಹೆಗಡೆ ಹೀಪನಹಳ್ಳಿ (1937-45), ಜಿ. ವಿ. ಹೆಗಡೆ ಜಾನ್ಮನೆ (1945-52), ಶ್ರೀಪಾದ ಹೆಗಡೆ ಕಡವೆ (1952-57,), ಜಿ. ಎಸ್. ಹೆಗಡೆ ಅಜ್ಜಿಬಳ (1957-58), ತಿಮ್ಮಪ್ಪ ಹೆಗಡೆ ಮೋಟಿನಸರ (1959-60), ಶ್ರೀಪಾದ ಹೆಗಡೆ ಕಡವೆ (1960-75), ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ(1975-84), ಶ್ರೀಪಾದ ಹೆಗಡೆ ಕಡವೆ (1984-87), ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ(1987-93), ಶ್ರೀಪಾದ ಹೆಗಡೆ ಕಡವೆ (1993-95),ಶಾಂತಾರಾಮ ಹೆಗಡೆ ಶಿಗೇಹಳ್ಳಿ (1995-2023), ಈಗ ನೂತನ ಅಧ್ಯಕ್ಷರಾಗಿ ಗೋಪಾಲ ಕೃಷ್ಣ ವೈದ್ಯ ಮತ್ತಿಘಟ್ಟ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಹಕಾರಿ ಸಂಘದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ 1958ರ ವರೆಗೆ ಇತ್ತು. ಜಡೆಯವರ ನಂತರ ಈ ಸ್ಥಾನ ತುಂಬಿದವರು ಕಾನೂನು ಪದವೀಧರ ದೇವೇಂದ್ರ ವಿಶ್ವಾಮಿತ್ರರು. ಇವರ ಕಾಲದಲ್ಲಿ ಶಿರಸಿಯಿಂದ ಸಿದ್ದಾಪುರ, ಯಲ್ಲಾಪುರ ತಾಲೂಕಿನಲ್ಲಿ ಶಾಖೆ ಆರಂಭವಾಗಿ ವ್ಯಾಪಾರ ಚಟುವಟಿಕೆ ಶುರುವಾಯಿತು. ಗೋದಾಮು ಸ್ಥಾಪನೆ, ಮುಂಬೈಯಲ್ಲಿ ಸಂಘದ ಪರವಾಗಿ ಅಡಿಕೆ ವ್ಯಾಪಾರ ಆರಂಭವಾಯಿತು.
ಶಿರಸಿ ನಾಡಿಗಗಲ್ಲಿಯ ಸ್ವರ್ಣವಲ್ಲಿ ಮಠದ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ಕಚೇರಿಯನ್ನು ಇಂದಿನ ಮಾರುಕಟ್ಟೆಯ ವಿಶಾಲ ಪ್ರಾಂಗಣದಲ್ಲಿ ಬೆಳೆಸಲು ಶ್ರೀಪಾದ ಹೆಗಡೆ ಕಡವೆ ಹೆಜ್ಜೆಯಿಟ್ಟರು. ಟೀಕೆ,ಅಡೆತಡೆಗಳನ್ನು ಮೀರಿ ಸಂಕಲ್ಪದ0ತೆ ಕಾರ್ಯ ಸಾಧಿಸಿದರು. ಅಡಿಕೆ ದರ ಕುಸಿತ ಕಂಡಿತು. ಆದರೂ ಹೆದರದೆ ಹಳ್ಳಿ ಹಳ್ಳಿಗೆ ಹೋಗಿ ಸಹಕಾರಿ ಸಂಘದ ಸಭೆಗಳಲ್ಲಿ ಭಾಗವಹಿಸಿ ಸಹಕಾರಿ ಸಂಘದ ಪ್ರಯೋಜನ ಮನವರಿಕೆ ಮಾಡಿಕೊಟ್ಟರು. ರೈಸ್ ಮಿಲ್, ಪೆಟ್ರೋಲ್ ಬಂಕ್, ಪಂಪ್ ಸೆಟ್, ಕಿರಾಣಿ, ಮೆಡಿಕಲ್ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಒದಗಿಸುತ್ತಾ ಕೃಷಿಕರ ಅಭಿವೃದ್ಧಿ, ಸಂಸ್ಥೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಇವರ ಅಗಲಿಕೆಯ ನಂತರ ಅವರ ಅಳಿಯ, ಮುಂಡಗನ ಮನೆ ಸೊಸೈಟಿಯ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅಧ್ಯಕ್ಷರಾಗಿ ಸತತ 28ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಇವರ ಅನಾರೋಗ್ಯ ಕಾರಣ ರಾಮಕೃಷ್ಣ ಹೆಗಡೆ ಕಡವೆ ಕಾರ್ಯಾಧ್ಯಕ್ಷರಾದರು.

300x250 AD

ಅಡಿಕೆ ಕೃಷಿಕರ ಸಹಕಾರಿ ಸಂಘದಲ್ಲಿ ಮುಂಚೂಣಿಯಲ್ಲಿ ತೋಟಿಗರ ಸಹಕಾರಿ ಸಂಘವಿದೆ. ಪ್ರಸ್ತುತ ಷೇರು ಸದಸ್ಯರು 3800ವಾರ್ಷಿಕ ವಹಿವಾಟು 1830 ಕೋಟಿ ತಲುಪಿದೆ. ಸೂಪರ್ ಮಾರ್ಕೆಟ್, ಸ್ವೀಟ್ ಸುಪಾರಿ, ಪೆಟ್ರೋಲ್ ಬಂಕ್, ಹೊಟೆಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆ ಬೆಳೆದಿದೆ.ಸುಮಾರು 1600ಕ್ಕೂ ಹೆಚ್ಚು ಸಿಬ್ಬಂದಿಗಳ ದೊಡ್ಡ ತಂಡವಿದೆ. ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯು 100 ವಸಂತವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದರ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಮ್. ಎಸ್. ಜಡೆಯವರ ಕುಟು0ಬವನ್ನು ಬೇಟಿ ಮಾಡಿ ಅವರ ನಿವಾಸದಲ್ಲಿ ಮೊಮ್ಮಗನಾದ ಅಶೋಕ ಪ್ರಹ್ಲಾದ್‌ರಾವ್ ಜಡೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟ, ಉಪಾಧ್ಯಕ್ಷರಾದ ಎಮ್. ಎನ್. ಭಟ್ಟ ತೋಟಿಮನೆ ಆಡಳಿತ ಮಂಡಳಿ ನಿರ್ದೇಶಕರಾದ ಪುರುಷೋತ್ತಮ ನರಸಿಂಹ ಹೆಗಡೆ ಕಳಲೆಮಕ್ಕಿ ಪ್ರಧಾನ ವ್ಯವಸ್ಥಾಪಕ(ಪ್ರಭಾರಿ) ವಿಜಯಾನಂದ ಸು. ಭಟ್ಟ ಹಾಗೂ ಶಿವಾನಂದ ಹೆಗಡೆ ಕಳವೆ ಇವರುಗಳು ಉಪಸ್ಥಿತರಿದ್ದರು.ಹಾಗೂ ಈ ಸಂದರ್ಭದಲ್ಲಿ ಅಶೋಕ ಪ್ರಹ್ಲಾದ್‌ರಾವ್ ಜಡೆ ಇವರನ್ನು ಸಂಘಕ್ಕೆ ಭರಮಾಡಿಕೊಂಡು ಸಂಘದ ಶೇರು ಸದಸ್ಯತ್ವವನ್ನು ನೀಡಲಾಯಿತು.

Share This
300x250 AD
300x250 AD
300x250 AD
Back to top