ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ದಸರಾ ಆನೆಗಳಿಗೆ ‘ಗಜಪೂಜೆ’ ನೆರವೇರಿತು. ಗಜಪಡೆಗಳನ್ನು ಅಲಂಕರಿಸಿ ಅವುಗಳಿಗೆ ಬೇಕಾದ ಭಕ್ಷ್ಯಗಳನ್ನು ನೀಡಿ ಗೌರವಿಸಲಾಗಿದೆ.
ಹನಿ ಹನಿ ಮಳೆಯಲ್ಲಿಯೇ ಡಿಸಿಎಫ್ ಗಳಾದ ಸೌರಭ್ ಕುಮಾರ್, ಬಸವರಾಜು ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಆನೆಗಳ ಹಣೆಗೆ, ಸುಂಡಿಲು, ಪಾದಗಳಿಗೆ ಅರಿಶಿನ ಕುಂಕುಮ ಹಾಗೂ ಗಂಧವನ್ನು ಹಚ್ಚಲಾಯಿತು. ಬಳಿಕ ಸೇವಂತಿಗೆ ಹೂಗಳಿಂದ ಅವುಗಳನ್ನು ಅಲಂಕಾರ ಮಾಡಲಾಯಿತು, ಚಾಮರವನ್ನು ಬೀಸಲಾಯಿತು. ಪಂಚ ಫಲ ತಿನಿಸುಗಳನ್ನು ನೈವೇದ್ಯ ನೀಡಲಾಯಿತು. ಅರಮನೆ ಅರ್ಚಕ ಪ್ರಹ್ಲಾದ್ ರಾವ್ ಅವರು ಆನೆಗಳಿಗೆ ಪಂಚ ಫಲ, ಕೊಡುಬಳೆ, ಒಬ್ಬಟ್ಟು, ರವೆ, ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು ಕಲ್ಲು ಸಕ್ಕರೆ, ಮೋದಕ ಮೊದಲಾದ ಗಣೇಶ ದೇವರಿಗೆ ಇಷ್ಟವಾದ ತಿನಿಸುಗಳನ್ನು ನೀಡಿದರು ಎಂದು ವರದಿಗಳು ತಿಳಿಸಿವೆ.