ಶಿರಸಿ: ಕಸ್ತೂರಬಾ ಆಸ್ಪತ್ರೆ ಮಣಿಪಾಲ ಇದೇ ಮೊದಲ ಬಾರಿಗೆ ಶಿರಸಿಯಲ್ಲಿ ಮಾಹಿತಿ ಕೇಂದ್ರ ಆರಂಭಿಸುತ್ತಿದೆ. ಇಲ್ಲಿಯೇ ವೈದ್ಯರ ಸಮಯ ಪಡೆದು ಆಸ್ಪತ್ರೆಗೆ ನೇರವಾಗಿ ತೆರಳಬಹುದಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಿಂದ ಕಸ್ತೂರ್ಬಾ ಆಸ್ಪತ್ರೆಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಜಿಲ್ಲೆಯ ವಿವಿಧೆಡೆ ಈಗಾಗಲೇ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿತ್ತಾದರೂ, ಶಿರಸಿಯಲ್ಲೂ ಮಾಹಿತಿ ಕೇಂದ್ರ ಆರಂಭಿಸುವ ನಮ್ಮ ಯತ್ನ ಈಗ ಫಲಕಾರಿಯಾಗಿದೆ. ಶಿರಸಿ ಮತ್ತು ಸುತ್ತಮುತ್ತಲಿನ ಜನತೆಗೆ ವೈದ್ಯರ ಭೇಟಿಗೆ ಹೆಸರು ನೋಂದಾವಣಿ, ಒಪಿಡಿ ವೇಳಾಪಟ್ಟಿ ಲಭಿಸಲಿದೆ. ಹೀಗಾಗಿ, ಆಸ್ಪತ್ರೆಗೆ ತೆರಳಿ ಅಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ ಎಂದರು.
ಸಾರ್ವಜನಿಕರಿಗೆ ಉಪಯುಕ್ತವಾದ ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯನ್ನು ನಾವು ಆರಂಭಿಸಿದ್ದೇವೆ. ಅಲ್ಪ ಮೊತ್ತವನ್ನು ಪಾವತಿಸುವ ಮೂಲಕ ಈ ಕಾರ್ಡ್ ಮಾಡಿಸಿಕೊಂಡರೆ ಆಸ್ಪತ್ರೆಯ ಎಲ್ಲ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಶಿರಸಿ ಮಾಹಿತಿ ಕೇಂದ್ರದ ಮುಖ್ಯಸ್ಥ ಜೀತೇಂದ್ರಕುಮಾರ, ಚೇತನ, ಪ್ರವೀಣ ಇತರರು ಉಪಸ್ಥಿತರಿದ್ದರು.