ಶಿರಸಿ: ನಿರಂತರ 32 ವರ್ಷ ಹೋರಾಟದ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕಿಗಾಗಿ ಪ್ರಬಲ ಹೋರಾಟವನ್ನು ಮುಂದುವರೆಸುವುದು ಹಾಗೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನವೆಂಬರ್‌ನಲ್ಲಿ ಡೆಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲು ಹೋರಾಟಗಾರರ ವೇದಿಕೆಯು ನಿರ್ಣಯಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯದಲ್ಲಿ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಹೋರಾಟದ 33ನೇ ವರ್ಷದ ಪಾದಾರ್ಪಣೆಯ ಸಂದರ್ಭದಲ್ಲಿ ಹಮ್ಮಿಕೊಂಡ “ಅರಣ್ಯ ಭೂಮಿ ಹಕ್ಕು ಹೋರಾಟ” ಚಿಂತನಾ ಸಭಾ ಕಾರ್ಯಕ್ರಮದಲ್ಲಿ ಅರಣ್ಯವಾಸಿಗಳು ನಿರ್ಣಯಿಸಿದರು.
ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟವನ್ನು ಮುಂದುವರೆಸಿ ಅರಣ್ಯ ಭೂಮಿ ಹಕ್ಕಿಗಾಗಿ ಜನಜಾಗೃತಿ ಅಭಿಯಾನವನ್ನು ಜಿಲ್ಲಾದ್ಯಂತ ಸಂಘಟಿಸುವುದು. ಸಕ್ರಿಯ ಅರಣ್ಯವಾಸಿ ಸದಸ್ಯರಿಗೆ ಉಚಿತವಾಗಿ ಗುರುತಿನ ಪತ್ರವನ್ನು ನೀಡುವುದು. ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ಪ್ರಬಲ ಕಾನೂನು ಹೋರಾಟ ಜರುಗಿಸುವುದು ಹಾಗೂ ಅರಣ್ಯವಾಸಿಗಳಿಗೆ ಕಾನೂನು ಜ್ಞಾನವನ್ನು ಹೆಚ್ಚಿಸುವ ಮುಂತಾದ ನಿರ್ಣಯಗಳನ್ನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಇಬ್ರಾಹಿಂ ಗೌಡಳ್ಳಿ, ಜಿಬಿ ನಾಯ್ಕ ಬೇಡ್ಕಣಿ, ಖೈರುನ್ನಿಸಾ ಮೆಹಬೂಬಲಿ ಸಾಬ, ಅಬ್ದುಲ್ ವಾಹಿದ್, ಚಿದಾನಂದ ಬಸಪ್ಪ ನಾಯ್ಕ, ಕನ್ನಪ್ಪ ನಾರಾಯಣ ನಾಯ್ಕ, ಮೆಹಬೂಬಲಿ ಇಮಾಮ ಪಟೇಲ್, ಬಿಬಿ ಅಮಿನಾ ಶೇಖ್, ಮೆಹಬೂಬಲಿ ಬಾಬುಸಾಬ ದಾಸನಕೊಪ್ಪ, ಅಲಿಸಾ ಮಹಮ್ಮದ್ ಸಾಬ ಮುಂತಾದವರು ಉಪಸ್ಥಿತರಿದ್ದರು.
ಹೋರಾಟ 33ನೇ ವರ್ಷಕ್ಕೆ ಪಾದಾರ್ಪಣೆ:
ಅರಣ್ಯವಾಸಿಗಳ ಭೂಮಿ ಹಕ್ಕು ನೀಡುವ ದಿಶೆಯಲ್ಲಿ ಕಳೆದ 32ವರ್ಷಗಳಲ್ಲಿ ಜಿಲ್ಲಾದ್ಯಂತ 5 ಸಾವಿರಕ್ಕೂ ಮಿಕ್ಕಿ ವಿವಿಧ ರೀತಿಯ ಹೋರಾಟ ಜರುಗಿಸಿರುವುದು ಜಿಲ್ಲೆಯ ಇತಿಹಾಸದಲ್ಲಿ ದಾಖಲಾರ್ಹ. ಅರಣ್ಯ ಭೂಮಿ ಹಕ್ಕು ಸಿಗುವವರೆಗೂ ಹೋರಾಟ ಮುಂದುವರೆಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.