ಶಿರಸಿ: ಜಿಲ್ಲಾ ಪಂಚಾಯತ್ ಉತ್ತರಕನ್ನಡ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ (ಉ.ಕ) ಲಯನ್ಸ್ ಕ್ಲಬ್ ಶಿರಸಿ, ಸಿರ್ಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ.), ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 8 ಮತ್ತು 9 ರಂದು ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಶಿರಸಿ ತಾಲೂಕಾ ಮಟ್ಟದ ಕ್ರೀಡಾಕೂಟ 2023 ಕ್ರೀಡಾಕೂಟವು ಶಿಸ್ತಿನಿಂದ, ಅಚ್ಚುಕಟ್ಟಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ್, ಕ್ರೀಡೆ ವಿದ್ಯಾರ್ಥಿಗಳನ್ನು ಸದೃಢನ್ನಾಗಿಸುತ್ತದೆ. ನಮ್ಮ ಶಿರಸಿ ಭಾಗದ ವಿದ್ಯಾರ್ಥಿಗಳು ಓದು, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲೆಲ್ಲ ಮುಂದಿರುತ್ತಾರೆ.ಈ ನೆಲದ ಮಹಿಮೆ ಹಾಗಿದೆ.ಎಂದು ಹೆಮ್ಮೆಯಿಂದ ಹೇಳಿಕೊಂಡರು. ವಿದ್ಯಾರ್ಥಿಗಳು ಓದಿನ ಜೊತೆ ಜೊತೆಗೆ ಕ್ರೀಡೆಗೂ ಪ್ರಾಶಸ್ತ್ಯ ನೀಡಿ ಉತ್ತಮ ಸಾಧನೆಯನ್ನು ಮಾಡಿ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಉತ್ತಮ ಭವಿಷ್ಯವಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ ,ಲಯನ್ಸ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷರಾದ ಎಂಜಿಎಫ್ ಲಯನ್ ಪ್ರಭಾಕರ್ ಹೆಗಡೆ, ಕೋಶಾಧ್ಯಕ್ಷರಾದ ಎಂಜೆಎಫ್ ಲಯನ್ ಉದಯ್ ಸ್ವಾದಿ, ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವಿ ನಾಯಕ್, ಸದಸ್ಯರಾದ ಲಯನ್ ಲೋಕೇಶ್ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂಜೆಎಫ್ ಲಯನ್ ಅಶೋಕ್ ಹೆಗಡೆ, ಲಯನ್ಸ್ ಸಮೂಹ ಶಾಲಾ ಕಾಲೇಜು ಪ್ರಾಂಶುಪಾಲರಾದ ಶಶಾಂಕ್ ಹೆಗಡೆ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಸಕರು ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟವು ಆರಂಭವಾಯಿತು. ಲಯನ್ಸ್ ಶಾಲೆಯ ಕ್ರೀಡಾಪಟುಗಳು ಕ್ರೀಡಾ ಜ್ಯೋತಿ ಬೆಳಗಿಸಿದರು. ಪ್ರಾರ್ಥನಾಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ ಸ್ವಾಗತಿಸಿದರು.
ಲಯನ್ಸ್ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ಅನಿತಾ ಭಟ್ ಮತ್ತು ಶ್ರೀಮತಿ ಚೈತ್ರಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನ ನಡೆದ ಕ್ರೀಡಾಕೂಟ ಅಚ್ಚುಕಟ್ಟಾಗಿ ನೆರವೇರಿತು. ಲಯನ್ಸ್ ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಕೂಡ ಉತ್ಸಾಹದಿಂದ ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಸುಂದರ ಹಾಗೂ ಸುಸಜ್ಜಿತವಾದ ವೇದಿಕೆಯ ಸಜ್ಜು ,ಶುಚಿ ರುಚಿ ಊಟೋಪಚಾರ ವ್ಯವಸ್ಥೆ , ಪ್ರಮಾಣ ಪತ್ರ ಬರವಣಿಗೆ, ಮತ್ತು ಜೋಡಣೆ, ಕಾರ್ಯಕ್ರಮ ನಿರ್ವಹಣೆ ಪ್ರತಿಯೊಂದರಲ್ಲೂ ಶಿಕ್ಷಕರು ಒಗ್ಗಟ್ಟಿನಿಂದ ಕೈಜೋಡಿಸಿ ಶಿಸ್ತುಬದ್ಧಾದ ಕ್ರೀಡಾಕೂಟಕ್ಕೊಂದು ಮಾದರಿಯಾದರು. ಲಯನ್ಸ್ ಶಾಲಾ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು,ಲಿಯೋ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ತುಂಬಾ ಉತ್ಸುಕತೆಯಿಂದ ಎರಡು ದಿನವೂ ಕ್ರೀಡಾಕೂಟದಲ್ಲಿ ಸೇವೆ ಸಲ್ಲಿಸಿದರು. ತಾಲೂಕಿನ ಹಲವಾರು ಶಾಲೆಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ವಿದ್ಯಾರ್ಥಿಗಳೆಲ್ಲರೂ ಕ್ರೀಡಾ ಮನೋಭಾವನೆಯಿಂದ ಆಟ ಆಡಿದರು. ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ದೈಹಿಕ ಶಿಕ್ಷಕರು, ಇನ್ನು ಹಲವಾರು ಕಾಣದ ಕೈಗಳು ಲಯನ್ಸ್ ಎಜುಕೇಶನ್ ಸೊಸೈಟಿ ಮತ್ತು ಲಯನ್ಸ್ ಕ್ಲಬ್ ನೊಂದಿಗೆ ಕೈ ಜೋಡಿಸಿದರು. ವೈಯಕ್ತಿಕ ವೀರಾಗ್ರಣಿ ಬಾಲಕರ ವಿಭಾಗದ ಪ್ರಶಸ್ತಿಯನ್ನು ಜೆಎಂಜೆ ಶಾಲೆಯ ಫ್ರಾನ್ಸಿಸ್ ಫರ್ನಾಂಡಿಸ್, ಬಾಲಕಿಯರ ವಿಭಾಗದಲ್ಲಿ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾವನಾ ಹೆಗಡೆ, ಲಯನ್ಸ್ ಶಾಲೆಯ ತನುಶ್ರೀ ಟಿ.ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನಳಾಗಿದ್ದು, ಸಮಗ್ರ ವೀರಾಗ್ರಣಿ ಶಾಲೆ ಪ್ರಶಸ್ತಿಯನ್ನು ಮಾರಿಕಾಂಬಾ ಪ್ರೌಢಶಾಲೆ ಪಡೆದುಕೊಂಡಿದೆ. ಎಂಜೆ ಎಫ್ . ಲ. ಉದಯ್ ಸ್ವಾದಿಯವರು ವಿದ್ಯಾರ್ಥಿಗಳಿಗೆ ನಗದು ರೂಪದ ಬಹುಮಾನವನ್ನು ನೀಡಿದರು. ಲಯನ್ಸ್ ಶಾಲೆಯು ಹಮ್ಮಿಕೊಂಡ ಈ ಎರಡು ದಿನಗಳ ಕ್ರೀಡಾಕೂಟವು ಅಚ್ಚುಕಟ್ಟುತನ ಮತ್ತು ಶಿಸ್ತಿಗೆ ಮಾದರಿಯಾಗಿದ್ದು ಉಲ್ಲೇಖನೀಯ.